FEAR vs STAMINA
FEAR vs STAMINA
ನಾನೀಗ ಹೇಳಹೊರಟಿರುವುದು ಒಂದು ಸಣ್ಣ ಚಾರಣದ ಕಥೆ, ಒಂದಿಷ್ಟು ವಿಚಾರಗಳು.
ಆಗಾಗ್ಗೆ ಚೆನ್ನಾಗಿರುವ, ಮಜಾ ಕೊಡುವ ಟ್ರೆಕ್ ಮಾಡಬೇಕು, ಫೋಟೋ ತೆಗಿಯಬೇಕೆನ್ನುವುದು ನನ್ನ ಗೀಳು. ಅದಕ್ಕೆ ಒಂಟಿಯಾದರೂ ಸರಿಯೇ ಹೋಗಬೇಕೆನ್ನುವ ಮನೋಭಾವ. ಅಥವ ಸರಿಯಾದ ಜೊತೆಗಾರರನ್ನು ಹುಡುಕಿಕೊಳ್ಳಲಾಗದ ಮೈಗಳ್ಳತನ. ಇಲ್ಲವಾದಲ್ಲಿ ಈಗ ಟ್ರೆಕ್ಕರ್ಸ್ ಗೇನೂ ಕಡಿಮೆ ಇಲ್ಲಾ, ಅಂತಾದ್ರದಲ್ಲಿ ಯಾರನ್ನು ಜೊತೆ ಮಾಡಿಕೊಳ್ಳಲಿಲ್ಲ ಅಂದರೆ ಅದೇ ಅನುಕಂಪ, ಅದೂ ಒಂದು ರೀತಿಯ ಸಾಹಸ ಅಂತಂದುಕೊಂಡ್ರೆ ಅದರ ವಿಚಾರನೇ ಬೇರೆ. ಆದ್ರೆ ಒಮ್ಮೊಮ್ಮೆ ಆಗುವ ಅನುಭವಗಳು, ಈ ದೇಹದಂಡಿಸುವ ಕ್ರಮ ನನ್ನನ್ನು ಹಲವು ಬಾರಿ ಈ ರೀತಿಯ ವಿಚಾರಗಳಲ್ಲಿ ಮುಳುಗಿಸುತ್ತವೆ. "ಇಷ್ಟೊಂದು ದುಡ್ಡು ಕಾಸಿದ್ದೂ ಈ ರೀತಿ ನಡೆಯೋದ್ರದಲ್ಲಿ ಏನಿದೆ ಅರ್ಥ?" ಇದು ನಮ್ಮನ್ನು ಸ್ಥಳಿಯರೊಮ್ಮೆ ಚಾರಣದ ಮಧ್ಯೆ ಕೇಳಿದ ಪ್ರಶ್ನೆ.
ಚಾರಣ ಹೋಗಲೇಬೇಕೆನ್ನುವ ನನ್ನ ಹಂಬಲಕ್ಕೆ ಈ ಬಾರಿಯು ಹಲವು ಸಿದ್ಧತೆಗಳು ನಡೆದಿದ್ದವು. ಆದರೂ ಹೊರಡುವುದಕ್ಕೆ ತೀರಾ ಹತ್ತಿರಕ್ಕೆ ಬಂದಾಗ ಏನೋ ಅನ್ಯಮನಸ್ಕತೆ ಮನತುಂಬಿ, ಎರಡು ದಿನ ಸಮಯ ವ್ಯರ್ಥ ಮಾಡಿದೆ. ಹೋಗುತ್ತೇನೆಂದು ಎಲ್ಲರ ಬಳಿಯು ಹೇಳಿಯಾಗಿದೆ, ಹೋಗಲೇ ಬೇಕಿತ್ತು. ಅಂತೂ ಹೊರಟೆ. ಬಸ್ಸು ಸಕಾಲಕ್ಕೆ ಸಿಗಲಿಲ್ಲ. ಅದೂ ಊರಿಗೆ ಇನ್ನು ಇಪ್ಪತ್ತು ಕಿ.ಮಿ. ಇರುವಾಗ ಮಾರ್ಗ ಮಧ್ಯೆ ಕೆಟ್ಟು ನಿಂತಿತು. ಬೇರೊಂದು ಬಸ್ಸು ದೊರೆತರು, ನಿಂತು ಪ್ರಯಾಣಿಸುವಾಗ ಅಸಹನೀಯ ಯಾತನೆ, ನಿದ್ದೆ ಇಲ್ಲ, ಒಂದೆಡೆ ಹಸಿವು ಸುಸ್ತಾಗಿ ಕೆಳಗಡೆ ಕುಳಿತಾಗ ಗಾಳಿಯಾಡದೆ ವಾಕರಿಕೆಯ ಮನಸ್ಥಿತಿ.
ಬೇರೆಯವರ ಸೀಟ್ ಪಡೆದು ವಾಂತಿ ಮಾಡಿಕೊಂಡೆ. ಘಾಟಿಗಳಲ್ಲಿ ಎಂದೂ ವಾಂತಿ ಮಾಡಿಕೊಂಡವನಲ್ಲ, ಧರ್ಮಸ್ಥಳ ಸೇರಲು ಇನ್ನು ಕೇವಲ ಒಂದು ಕಿ.ಮಿ. ಇರುವಾಗ ಈ ರೀತಿ ಆದದ್ದು ಏಕೋ ಈ ಟ್ರೆಕ್ ಡಿಸಾಸ್ಟರ್ ಎನ್ನುವ ಭಾವನೆ ಬಂದಿತ್ತು. ಬಸ್ಸಿಳಿದ ನಂತರ ಸುಸ್ತಾಗಿ ಅಲ್ಲಿಯೇ ಒಂದೆಡೆ ಮಲಗಿದೆ.
ಸ್ವಲ್ಪ ಸುಧಾರಿಸಿಕೊಂಡ ನಂತರ ಉಜಿರೆ ತಲುಪಿ ಅಲ್ಲಿಂದ ಚಾರ್ಮಾಡಿ ಘಾಟ್ ದಾರಿಯಲ್ಲಿ ಸಿಗುವ ಅಣ್ಣಪ್ಪಸ್ವಾಮಿ ದೇವಸ್ಥಾನ ತಲುಪಿದೆ. ಅಲ್ಲಿ ಸ್ವಲ್ಪ ಫ಼್ರೆಶ್ ಅಪ್ ಆಗಿ, ಭಟ್ಟರಲ್ಲಿ ಕೊಡೆಕಲ್ಲು ಮತ್ತು ಬಾಳೆ ಕಲ್ಲು ಗುಡ್ಡಕ್ಕೆ ದಾರಿ ಯಾವುದೆಂದು ವಿಚಾರಿಸಿದೆ. ಈ ಸ್ಥಳಗಳ ಬಗ್ಗೆ ಅವರು ಕೇಳಿದ್ದರಾದರೂ ಅವರ್ಯಾರು ಅಲ್ಲಿಗೇ ಹೋಗಿರುವುದಾಗಲಿ ದಾರಿಯು ತಿಳಿಯದು. ಈ ಕೊಡೆಕಲ್ಲು ದೇವಸ್ಥಾನ ಹಿಂಭಾಗದ ದೊಡ್ಡ ಬೆಟ್ಟದ ಮೇಲೆ ಇದೆ. ಇದು ಒಂದು ಬೃಹದಾಕಾರ ಬಂಡೆಯಾಗಿದ್ದು ಚಾಚಿಕೊಂಡಂತಿದೆ. ಇದರ ಕೆಳಗೆ ಸುಮಾರು ಜನ ಕೂರಬಹುದು. ಹಾಗಾಗಿ ಇದು ಕೊಡೆಕಲ್ಲು ಎಂದು ಪ್ರತೀತಿ. ಸಮೀಪದಲ್ಲಿಯೇ ಬಾಳೆಕಲ್ಲು ಗುಡ್ಡವಿದೆ.
ಕೊಟ್ಟಿಗೆಹಾರ ಹೋದರೆ ಯಾರಾದರೂ ಗೈಡು ಸಿಗಬಹುದು ಅಂತಲು, ಅಥವಾ ದಾರಿಯಲ್ಲಿ ಆಲೇಖಾನ್ ಎಸ್ಟೇಟ್‍ಗೆ ಒಂದು ರಸ್ತೆಯಿದ್ದು, ಅಲ್ಲಿ ವಿಚಾರಿಸಿದರೆ, ಯಾರಾದರು ದಾರಿ ತೋರಿಸಬಹುದು ಎಂದು ಭಟ್ಟ ಹೇಳಿದಾಗ ನಾನು ಬೈಕು ಸವಾರರೊಬ್ಬರಿಂದ ಸಹಾಯ ಪಡೆದು ಹೊರಟೆ. ಒಂದೆರಡು ಕಿ.ಮೀ. ನಂತರ ಸಿಕ್ಕ ಎಸ್ಟೇಟ್ ದಾರಿಯಲ್ಲಿ ಗಾಡಿ ಇಳಿದು ನಡೆಯಲು ಶುರು ಮಾಡಿದೆ. ಸುಮಾರು ಒಂದು ಕಿ.ಮಿ. ನಂತರ ಎರಡು ದಾರಿ ಬಂತು. ಬಲಕ್ಕೆ ಎಸ್ಟೇಟ್ ಕಡೆಯಿಂದಲಾದರು ದಾರಿ ಇರಬಹುದೆಂದು ಊಹಿಸಿ ಅತ್ತ ನಡೆದೆ. ತುಂಬಾ ದೂರ ನಡೆದರೂ ಅಲ್ಲಿ ಜನವಾಗಲಿ, ಕೆಲಸಗಾರರಾಗಲಿ, ಮನೆಯಾಗಲಿ ಸಿಗಲಿಲ್ಲ. ಎಸ್ಟೇಟ್ ದಾರಿ ಬಿಟ್ಟು ಮತ್ತೆ ಹಿಂದಿರುಗಿ ಆ ಕವಲು ದಾರಿಗೆ ತಿರುಗಿ ಬಂದು ಇನ್ನೊಂದು ದಾರಿಯಲ್ಲಿ ನಡೆಯುತ್ತಿದ್ದಾಗ ಎಸ್ಟೇಟ್ ಕಡೆಯಿಂದ ಯಾರೋ ಮಾತನಾಡುತ್ತಾ ಇಬ್ಬರು ಬರುತ್ತಿದ್ದರು. ಅವರ ಬಳಿ ದಾರಿ ಕೇಳಿದಾಗ ಎಸ್ಟೇಟ್ ಕಡೆಯಿಂದ ಹೋಗಬಹುದು, ಆದರೆ ದಾರಿ ದೂರವಾಗುತ್ತದೆ, ಜೊತೆಗೆ ನಿಮಗೆ ತಿಳಿಯುವುದಿಲ್ಲಾ, ದಾರಿ ತೋರಲು ಯಾರು ಇಲ್ಲಾ, ನೀವು ವಾಪಸ್ಸು ಹೋಗಿ ದೇವಸ್ಥಾನಕ್ಕಿಂತಾ ಮುಂಚೆ ೧ ಕಿ.ಮಿ. ಹಿಂದೆ, ಒಂದು ರಸ್ತೆಯಿದೆ ಆ ರಸ್ತೆಯಲ್ಲಿ ೪ ಕಿ.ಮಿ. ಹೋದರೆ ಬಿದಿರುತಳ ಎಂಬ ಒಂದು ಊರಿದೆ, ಅಲ್ಲಿಂದ ೨ ಕಿ.ಮಿ. ಕೊಡೆಕಲ್ಲು... ಎಂದು ತಿಳಿಸಿದರು.
ಮತ್ತೆ ಹಿಂದಿರುಗಿ ನಡೆಯುವ ಸರದಿ ಈಗ. ದಾರಿಯಲ್ಲಿ ಮತ್ತೊಂದು ಬೈಕ್ ಲಿಫ್ಟ್ ಸಿಕ್ಕಿತು. ಬಿದಿರುತಳ ದಾರಿ ಸಿಕ್ಕಿದಾಗ ಖುಷಿಯಿಂದ ನಡೆದೆ... ಈ ಖುಷಿ ಬಹುಕಾಲ ಉಳಿಯಲಿಲ್ಲ. ತೀರಾ ಕಡಿದಾದ ದಾರಿಯು ಬೆಟ್ಟವನ್ನು ಸುತ್ತಿ ಸುತ್ತಿ ಹತ್ತುತ್ತಾ ಹೋಗುತ್ತಿತ್ತು. ಮೊದಮೊದಲು ದಾರಿಯಲ್ಲಿ ಜನರು ನಡೆದ ಹೆಜ್ಜೆ ಗುರುತಿತ್ತು, ಸುಮಾರು ಒಂದು ಕಿ.ಮಿ. ನಡೆದ ನಂತರ ದಾರಿ ಮತ್ತೆರೆಡಾಯಿತು. ದೇವಸ್ಥಾನದ ಹಿಂದೆಯೇ ಗುಡ್ಡ ಇರುವುದರಿಂದ ಎಡ ಭಾಗದ ರಸ್ತೆ ಸರಿ ಇರಬಹುದೆಂದು ನಡೆಯ ಹತ್ತಿದೆ. ಹೋಗ ಹೋಗುತ್ತಾ ರಸ್ತೆ ಏರುತ್ತಾ ಹೋಗುತ್ತಿತ್ತು. ದೂರದಲ್ಲಿ ಚಾರ್ಮಾಡಿ ಘಾಟ್‍ನ ಹಲವು ಗುಡ್ಡಗಳ ಮನಮೋಹಕ ದೃಶ್ಯಗಳು ಕಾಣಹತ್ತಿದವು. ಬೆಳಿಗ್ಗೆ ೯.೩೦ ಸಮಯ, ಅದಾಗಲೇ ಸೂರ್ಯ ಸುಡುತ್ತಿದ್ದ. ಕಾಡು ದಟ್ಟವಾಗುತ್ತಿತ್ತು. ದಾರಿಯಲ್ಲಿ ಜನರ ಸುಳಿವೇ ಇಲ್ಲ. ತೀರಾ ಏರಿನ ದಾರಿ ಕ್ರಮಿಸಿ ಸುಧಾರಿಸಿಕೊಳ್ಳಲು ದಾರಿ ಮಧ್ಯೆದಲ್ಲಿ ನಿಂತಿದ್ದೆ. ನೀರವ ಮೌನ.
ಅಕ್ಕ ಪಕ್ಕದಲ್ಲಿ ಮರಗಳು, ಜೊತೆಯಲ್ಲಿ ಯಾರು ಇಲ್ಲ. ಆಯಾಸ ಪರಿಹರಿಸಿಕೊಳ್ಳುತ್ತಾ ಯಾವುದೋ ಆಲೋಚನೆಯಲ್ಲಿರುವಾಗ
ಅದ್ಯಾವುದೋ ಜೋರಾದ ವಿಚಿತ್ರ ಕೀರಲು ಸದ್ದು. ಒಮ್ಮೆಲೇ ಭಯವಾಯಿತು, ಕೊಂಬೆಗಳು ಗಾಳಿಗೆ ಉಜ್ಜಿ ಕೀರಲು ಶಬ್ಧ ಮಾಡಿತ್ತು. ನಿಶ್ಶಬ್ದವಾದ ವಾತಾವರಣದಲ್ಲಿ, ಯಾವುದೋ ಆಲೋಚನೆಯಲ್ಲಿರುವಾಗ ಹಠಾತ್ತನೆ ಶಬ್ಧ ಕೇಳಿ ಭಯವಾಯ್ತು, ಒಮ್ಮೆಲೆ ಮೈಯಲ್ಲಿ ಮಿಂಚು ಸುಳಿದಾಡಿದಂತಾಯಿತು. ಇದೇನು ಮೊದಲಲ್ಲವಾದರೂ ಒಬ್ಬನೆ ಇದ್ದಿದ್ದರಿಂದ ಏನೋ ಅವ್ಯಕ್ತ ಭಯ ಆವರಿಸಿಕೊಳ್ಳುತ್ತ ಹೋಯಿತು.
ಘಾಟ್ ರಸ್ತೆಗಳಂತೆ, ಇಲ್ಲಿಯೂ ಕೂಡ ಬೆಟ್ಟದ ಅಂಚಿನಲ್ಲಿ ಕೊರೆದ ದಾರಿ ಇದು, ಮಳೆ ನೀರು ಹರಿದು ಮಣ್ಣೆಲ್ಲಾ ಸವೆದು ಬರಿಯ ಕಲ್ಲುಗಳೇ ತುಂಬಿದ್ದವು, ಜಾಸ್ತಿ ಯಾರು ಜನ ನಡೆದಾಡುತ್ತಿಲ್ಲವಾದ್ದರಿಂದ ಕಾಡು ಬೆಳೆದು ಹಲವೆಡೆ ದಾರಿ ಚಿಕ್ಕದಾಗುತ್ತಾ ಬಂದಿತ್ತು. ಇವೆಲ್ಲಾ ಕಾರಣಗಳಿಂದ ಈ ರಸ್ತೆ ಮತ್ತು ಟ್ರೆಕ್ ವಿಶಿಷ್ಟವಾಗತೊಡಗಿತು... ವಯಸ್ಸಾದ ಕಾಲಕ್ಕೆ ಏದುಸಿರು ಜಾಸ್ತಿಯಾಗುತ್ತಿದೆ,
ಇದೊಂದು ದಮ್ಮು ಮತ್ತು ಭಯ ನಡುವಿನ ಸಮರ ಎಂದು ಅನಿಸಿತು. ಈ ರೀತಿಯ ಟ್ರೆಕ್‍ಗಳಲ್ಲಿ ನಡೆಯುವುದೊಂದೇ ಗುರಿ, ಗುರಿ ಮುಟ್ಟುವುದು/ಮುಟ್ಟದಿರುವುದು ಬೇರೆಯದೇ ಕಥೆ. ಯಾವ ಕ್ಷಣದಲ್ಲಾದರೂ ಏನಾದರೂ ಅನಾಹುತಗಳಾಗಬಹುದು, ಮನಸೋಲಬಹುದು, ಸಾಕಿನ್ನು ಎಂದು ಹಿಂದಿರುಗಬಹುದು. ನಿಮ್ಮೊಡನೆ ದಾರಿ ಸೇರಿಸಲು ತಿಳಿದವರ್ಯಾರು ಇಲ್ಲಾ, ಗುಡ್ಡದ ಕೊನೆಯು ಕಾಣುತ್ತಿಲ್ಲಾ, ಸ್ವಲ್ಪವೇ ದೂರ ಕ್ರಮಿಸಿದರೂ ತುಂಬಾ ದೂರ ಬಂದಂತೆ ಅನಿಸುವುದು, ಜೊತೆಗೆ ಆಯಾಸ, ಹೀಗೆ ನೂರಾರು ತೊಂದರೆಗಳು ಈ ಚಾರಣದಲ್ಲಿ. ಹೀಗೆಲ್ಲಾ ಇದ್ದರು ಯಾಕೆ ಮತ್ತೆ ಮತ್ತೆ ಗುಡ್ಡ ಹತ್ತಬೇಕು, ಬೆಟ್ಟ ಇಳಿಯಬೇಕು... ಅದೇ ಇದರ ಆಕರ್ಷಣೆ. ಒಮ್ಮೆ ಪ್ರಖ್ಯಾತ ತೇನ್ ಸಿಂಗ್ ರನ್ನು ಯಾರೋ ಕೇಳಿದರಂತೆ: ಎವೆರೆಸ್ಟ್ ಯಾಕೆ ಹತ್ತುತ್ತಾರೆ? ಯಾಕೆಂದರೆ, ಅದು ಅಲ್ಲಿದೆ. ಎಂಥಾ ಉತ್ತರ!
ಸುತ್ತಲ ನೀಲಾಕಾಶ ಕಂಡರೆ ಗುಡ್ಡದ ಕೊನೆ ಬಂದೆವು ಎಂದರ್ಥ. ಹಾಗೆಂದುಕೊಂಡೆ ಆ ತಿರುವಿನಲ್ಲಿ ಕೊನೆ, ಈ ತಿರುವಿನಲ್ಲಿ ಕೊನೆ ಎಂದುಕೊಂಡೆ ಮುಂದೆ ಮುಂದೆ ಬರುತ್ತಿದ್ದಂತೆ ಮತ್ತೆ ದಾರಿ ಕವಲಾಯಿತು. ಗುಡ್ಡದ ಕೊನೆ ಮಾತ್ರ ಸಿಗಲಿಲ್ಲ, ತೀರಾ ಏರಿನ ದಾರಿ, ಸ್ವಲ್ಪ ನಿಂತು ನಿಂತು ನಡೆಯುತ್ತಿದ್ದೆ. ಹಾಗೆಯೇ ಸುಮಾರು ಅರ್ಧಘಂಟೆ ನಡೆದ ನಂತರ ಬಲಭಾಗದ ಇಳಿಜಾರಿನಲ್ಲಿ ಒಂದೆರೆಡು ಮನೆ ಕಂಡಾಗ ಬಿದಿರುತಳ ಬಂತೆನ್ನಿಸಿ ಮನ ಗೆಲುವಾಯಿತು. ಈ ಸ್ಥಳ ಗುಡ್ಡದ ಮೇಲಿನ ವಿಶಾಲ ಬಯಲಲ್ಲಿದೆ. ಇಲ್ಲಿಗೆ ಬಿದುರುತಳ ಎಂಬ ಹೆಸರು ಹೇಗೆ ಬಂತೋ! ಮನೆಯ ಬಳಿ ಬಂದೆ, ಯಾರು ಇದ್ದಂತಿರಲಿಲ್ಲ, ಸುತ್ತಲು ಕಾಡು ಕಡಿದು ಗದ್ದೆ ಮಾಡಿಕೊಂಡಿದ್ದರು. ಇಲ್ಲಿ ಮನೆ, ಗದ್ದೆ ಮಾಡಿಕೊಂಡು ಬದುಕುವುದೇ ಸೋಜಿಗ. ಆನೆಗಳು, ಕಾಡೆಮ್ಮೆಗಳು, ಪ್ರಾಣಿಗಳು ಸುಳಿದಾಡುವ ಜಾಗ, ಒಂಟಿತನ, ಮನೆಯ ಚಿಕ್ಕ ಚಿಕ್ಕ ಸಾಮಾನು ತರಲು ಸುಮಾರು ದೂರ ನಡೆಯಲೇ ಬೇಕು, ಘಾಟಿ ಇಳಿದು ಹತ್ತಲೇ ಬೇಕು. ಜೀವನ ಸಾಹಸಮಯ ಮತ್ತು ಅನಿವಾರ್ಯ.
ಮನೆಯ ಬಳಿಯಲ್ಲಿಯೇ ಒಂದು ಹಳ್ಳದಲ್ಲಿ ನೀರು ಹರಿಯುತ್ತಿತ್ತು. ಬ್ಯಾಗ್ ಮತ್ತು ಕ್ಯಾಮೆರಾ ಇಳಿಸಿ, ಬೆವರಿನಿಂದ ಒದ್ದೆಯಾದ ಶರ್ಟ್ ಮತ್ತು ಬನಿಯನ್ ಕಿತ್ತೊಗೆದು ಅಂಗಾತ ಮಲಗಿ ಸ್ವಲ್ಪ ವಿಶ್ರಾಂತಿ ಪಡೆದೆ.
ನಂತರ ಹಳ್ಳದಲ್ಲಿ ಮುಖ ತೊಳೆದು ನೀರು ಕುಡಿದು, ಬನ್, ಬಿಸ್ಕತ್ ತಿನ್ನುತ್ತಾ, ತೆಗೆದುಕೊಂಡು ಹೋಗಿದ್ದ ಪ್ರಿ-ಮಿಕ್ಸ್ ಕುಡಿದು, ಸ್ವಲ್ಪ ಜೂಮ್ ಅನುಭವಿಸಿದೆ. ಫೋಟೊ ತೆಗೆದುಕೊಳ್ಳಲು ಮನಸ್ಸಾಗಿ ನೀರಿನ ಬಳಿ ಬಂದಾಗ, ದಂಡೆಯ ಬಳಿ ಹಸಿ ಮರಳಿನಲ್ಲಿ ಬಣ್ಣಬಣ್ಣದ ಚಿಟ್ಟೆಗಳು ಒಳ್ಳೆಯ ಫೋಟೊ ಅವಕಾಶ ನೀಡಿತ್ತು. ಹಲವಾರು ಏರೋಪ್ಲೇನ್ ಚಿಟ್ಟೆಗಳು ಹಾರಾಡುತ್ತಿದ್ದವು. ಪುಟ್ಟವು, ದೊಡ್ಡವು. ನಾನು ಈ ಹಿಂದೆ ನೋಡಿದ್ದಕ್ಕಿಂತಲೂ ದೊಡ್ಡದಾಗಿ ತಿಳಿ ನೀಲಿ ಬಣ್ಣ ಹೊಂದಿದ್ದವು. ನಾನು ಕುದುರೆಮುಖ ಚಾರಣದಲ್ಲಿ ಈ ಮೊದಲು ನೋಡಿದ್ದ ನೀಲಿ ಬಣ್ಣದ ಸುಂದರ ಡ್ರಾಗನ್‍ಫ಼್ಲೈ ನನಗೆ ಪೋಸ್ ನೀಡದೆ ಹಾರಿಹೋಯಿತು. ನಿಂದ್ರಲೆ, ಕೂರಲೇ ಸ್ವಲ್ಪ ಅಂದರೂ ಕೇಳಲೇ ಇಲ್ಲ.


ಅಲ್ಲೇ ಹರಿಯುವ ನೀರಿನೊಳಗೆ ಬಿಸಿಲಿನ ಝಳ ಸುಂದರ ಚಿತ್ರ ಮೂಡಿಸಿತ್ತು – ಮಧ್ಯೆ ಹುಲ್ಲುಕಡ್ಡಿ, ಅದರ ನೆರಳು, ಒಹ್! ಬ್ಯೂಟಿಫ಼ುಲ್! ಬ್ಯೂಟಿಫ಼ುಲ್! ಸೆರೆಹಿಡಿಯಹತ್ತಿದೆ. ಹುಲ್ಲಿನ ತೆನೆಗೆಳು ನನ್ನನ್ನು ಹಿಡಿ ಹಿಡಿ ಎನ್ನುವಂತೆ ಅಲುಗಾಡುತ್ತಿದ್ದವು. ನಾನು ಅವುಗಳನ್ನು ಸೆರೆಹಿಡಿಯುತ್ತಾ ಬೇರೊಂದು ಕೋನಕ್ಕಾಗಿ ತಿರುಗುತ್ತಿದ್ದಂತೆ ಹಠಾತ್ತನೆ ಹಾವೊಂದು ಈಜುತ್ತಾ ಬರುತ್ತಿತ್ತು. ಅರೇ ವೇರ್ ಡಿಡ್ ಯು ಕಮ್ ಫ್ರಂ ಎನ್ನುವ ಆಲೋಚನೆಯೊಂದಿಗೇ ಕ್ಷಣದಲ್ಲಿ ಫ಼ೋಕಸ್ ಮಾಡಿ ಕ್ಲಿಕ್ ಮಾಡುತ್ತಲೇ ಹೋದೆ, ಹಾವು ನೀರಿನಿಂದ ತಲೆ ಹೊರಗೆ ತಂದು ನನಗೆರಡು ಚೆಂದದ ಪೋಸ್ ಕೊಡ್ತು. ನಾನು ಫ಼್ರೇಮಿಂಗ್ ಸಲುವಾಗಿ ಒಂದೆಜ್ಜೆ ಮುಂದೆ ಬರುತ್ತಿದ್ದಂತೆ, ನನ್ನ ಕದಲಿಕೆಯನ್ನು ಗಮನಿಸಿ ಜೋರಾಗಿ ನೀರಿನಲ್ಲಿ ಮುಳುಗಿ ಈಜುತ್ತಾ ದಂಡೆಯ ಬಳಿ ಹರಿದು ಮಾಯವಾಯಿತು. ನಾನು ಈ ಹಾವು ಬಂದದ್ದನ್ನೇ ಗಮನಿಸಿರಲಿಲ್ಲ, ಅಷ್ಟು ಹಠಾತ್ತಾಗಿ ಬಂದು ಹೋಗಿತ್ತು. ಕ್ಯಾಮೆರ ಮಲ್ಟಿಪಲ್ ಶಾಟ್‍ಗೆ ಸೆಟ್ ಮಾಡಿದ್ದರಿಂದ ಬೇಗ ಫೋಟೋ ತೆಗೆಯಲು ಅನುವಾಯ್ತು.
ಬಣ್ಣದ ಚಿಟ್ಟೆಗಳು ಮತ್ತು ಹಾವಿನ ಚಿತ್ರಗಳು ಸಿಕ್ಕಿದ್ದು ಬಲು ಖುಷಿಯಾಯಿತು. ನನಗೆ ಇಷ್ಟವಾದ ಮತ್ತೊಂದು ಚಿತ್ರಕ್ಕೆ ತಯಾರಾದೆ. ಗದ್ದೆಯ ಬಳಿ ಬಿಳಿಯ ಬಣ್ಣದ ಹೂವುಗಳು ತುಂಬಾ ಇದ್ದವು. ನಾನಿವುಗಳನ್ನು ಪೂನ ಬಳಿಯ ಕಾಸ್ ಪತ್ತರ್ ಎನ್ನುವ ಹೂಗಳ ಕಣಿವೆಯಲ್ಲಿ ಮೊದಲ ಬಾರಿ ನೋಡಿದ್ದೆ. ಮತ್ತೆ ದೇವರಮನೆ ಬಳಿ ಚಾರಣದಲ್ಲೂ ನೋಡಿದ್ದೆ. ಆದರೂ ಆ ಹೂ ಚಿತ್ರಗಳ ಅವಕಾಶವನ್ನು ಬಿಡಲು ತಯಾರಿರಲಿಲ್ಲ. ಅದಕ್ಕಾಗಿ ನಾನು ಆ ಜಾರುವ ಗದ್ದೆಯೊಳಗೆ, ತುಂಬಾ ಬೆಲೆಬಾಳುವ ಕ್ಯಾಮೆರಾದೊಂದಿಗೆ ಇಳಿಯಲು ತಡಮಾಡಲಿಲ್ಲ. ಗದ್ದೆಯೊಳಗೆ ನೀರು ಮತ್ತು ಹುಲ್ಲು ಜಾಸ್ತಿ ಇತ್ತು. ಈ ನಡುವೆ ಭತ್ತ ಬೆಳೆಯುತ್ತಿಲ್ಲ ಎಂತೆನಿಸುತ್ತದೆ. ಮೊದಲು ಹುಲ್ಲಿನ ಮೇಲೆ ಕಾಲಿಟ್ಟೆ, ಸ್ವಲ್ಪವೇ ನೀರಿನೊಳಗಿಳಿಯಿತು ಕಾಲು... ಒಂದೆಜ್ಜೆ ಹಾಕಿದೆ, ಎಡಗಾಲು ನನ್ನ ಭಾರಕ್ಕೆ ತಾಳದೆ ತಪಕ್ಕನೆ ಕೆಸರಿನೊಳಗೆ ಮೊಣಕಾಲಿನ ಮಟ್ಟಕ್ಕೆ ಹೂತುಹೋಯಿತು. ಬೀಳಲಿಲ್ಲ ಸದ್ಯ, ಕಾಲು ಮೇಲೆಳೆದು ಕೊಂಡಾಗ ಮೆಟ್ಟಿದ್ದು ಜಾರಿತೆನ್ನುವ ಅನುಭವ. ಮೃದುವಾದ ಕೆಸರು, ತಣ್ಣನೆ ನೀರು, ಕಂಬಳದ ಅನುಭವ, ಓಡಲಿಕ್ಕೆ ಮಾತ್ರ ಆಗಲಿಲ್ಲ. ಕೆಸರಿನಲ್ಲೇ ನಡೆದು ಹೂಗಳ ಬಳಿ ಬಂದು ನಿಂತು, ಬಗ್ಗಿ, ಕೂತು ಹಲವು ಕೋನಗಳಲ್ಲಿ ಕ್ಲಿಕ್ಕಿಸಿದೆ. ಇದೇ ನನ್ನ ಟ್ರೆಕ್ಕಿಂಗ್ ಹೈಲೈಟ್ ಎನ್ನಿಸಿತು. ಜ಼ೂಮ್ ಅದಾಗಿಲೇ ಇಳಿದುಹೋಗಿತ್ತು.

ಸಮಯ ಸರಿಯಾಗಿ ಗೊತ್ತಿಲ್ಲ, ೨ ಗಂಟೆಯಾಗಿದ್ದಿರಬಹುದು. ಈ ನಡುವೆ ನಾನು ಹೊರಗೆ ಹೋದಾಗ ಸಮಯ ನೋಡಿಕೊಳ್ಳುವುದೇ ಇಲ್ಲ. ಹೋಗಬೇಕು ಹೋಗುತ್ತಿದ್ದೇನೆ ಎಂಥಾದರೆ ಯಾವ ಸಮಯಕ್ಕೆ ಪ್ರಾರಂಭಿಸಿದೆ, ಮುಗಿಸಿದೆ ಎಂಬ ಚಿಂತೀ ಯಾಕ? ಅದಾ ಸಮಯದಾಗ ಸುತ್ತಲಿನ ಪ್ರಪಂಚದಲ್ಲಿ ಮುಳುಗಿದರೆ ಅದ್ರ ಸೊಬಗೆ ಬೇರೆ ಐತಿ! ಮಾತನಾಡಲು ಯಾರು ಇಲ್ಲದಿದ್ದಾಗ್ಯೂ ಮನದೊಳಗೆ ವಿಚಾರಧಾರೆ ಪರಿ ಪರಿಯಾಗಿ ಹರಿಯುತ್ತಿತ್ತು. ಒಂಟಿ ಪ್ರಯಾಣ ಬೇಸರ, ಅದರಲ್ಲೂ ಇಂತಹ ಚಾರಣ ಹೇಗೆ ಮಾಡ್ತೀರಾ ಎಂದು ಹಲವರು ಕೇಳಿದ್ದಾರೆ. ನನಗೋ ಮನದೊಳಗಿನ ಗೆಳೆಯ ಗೆಳೆತಿಯರು ಹಲವಾರಿದ್ದಾರೆ. ಒಂಟಿ ಪಯಣಿಗನ ಅನುಭವವೇ ಬೇರೆಯದು ಎಂತಂದುಕೊಂಡರೆ ಅದರ ಮಜಾನೇ ಬೇರೆ.
ಹಿಂದಿರುಗಿ ಮನೆಯಬಳಿ ಬಂದಾಗ ಹೆಂಗಸೊಬ್ಬರು ಮನೆಗೆ ವಾಪಸ್ಸಾಗಿದ್ದರು. ಮಾತನಾಡಿಸಿದೆ. ಸ್ವಲ್ಪ ವಿವರಗಳು ದೊರೆತವು. ಒಬ್ಬನೇ ಅಲ್ಲಿಗೆ ಬಂದಿದ್ದು ಒಂಥರ ವಿಚಿತ್ರ ಎನಿಸಿತ್ತು ಆಕೆಗೆ. ಮಕ್ಕಳಿದ್ದಿದ್ದರೆ ನಿಮಗೆ ದಾರಿ ತೋರಿಸುತ್ತಿದ್ದರು. ಕಾಡಿನ ದಾರಿ, ಆನೆಗಳಿವೆ. ಒಬ್ಬರೆ ಹೋಗುವುದು ಕಷ್ಟ, ದಾರಿ ತಪ್ಪಿದರೆ... ಮತ್ತೊಮ್ಮೆ ಬನ್ನಿ ಅಂದರು. ವಾಪಸ್ಸು ಹೊರಡಲು ನಿರ್ಧರಿಸಿದೆ. ಮತ್ತೆ ಇನ್ನೊಮ್ಮೆ ಬಂದಾಗ ಗುಡ್ಡಕ್ಕೆ ಹೋಗುವೆ, ಬರುತ್ತೇನೆ ಎಂದು ಹೇಳಿ, ಕೊಡೆಕಲ್ಲು ಹಾದಿಗೆ ಬಂದಾಗ ಸ್ವಲ್ಪ ದೂರ ಮಾತ್ರ ನಡೆದು ದಾರಿ ಹೇಗಿದೆ ನೋಡೊಣ, ಪೂರ ಹೋಗುವುದು ಬೇಡ ಎಂದೆನಿಸಿತು. ಇಲ್ಲಿಂದ ಮುಂದೆ ಕಾಡು ದಟ್ಟವಾಗಿತ್ತು. ದಾರಿಯೇನೋ ಸ್ಪಷ್ಟವಾಗಿತ್ತು, ಆದರೆ ಆನೆಗಳು ತಿರುಗಾಡುತ್ತವೆ ಎಂದದ್ದು ಸ್ವಲ್ಪ ಸ್ವಲ್ಪವೇ ಭಯ ಆವರಿಸಲು ಕಾರಣವಾಗಿತ್ತು. ದಾರಿ ಹೋಗುತ್ತಾ ಭಾರಿ ಕಡಿದಾಗಿ ಇಕ್ಕೆಲಗಳಲ್ಲೂ ಆಗಾಧ ಕಂದರಗಳು, ಬಿಸಿಲು ನೆಲಕ್ಕೆ ಬೀಳದಂತೆ ಎತ್ತರರೆತ್ತರ ಬೆಳೆದ ಮರಗಳು, ನೆಲಕ್ಕೆ ಬಿದ್ದ ಎಲೆಗಳು ಗರಿ ಗರಿಯಾಗಿ ಬಹಳ ಸದ್ದು ಮಾಡುತ್ತಿದ್ದವು. ಕತ್ತಲು ಆವರಿಸಿ, ನೀರವತೆ ತುಂಬಿತ್ತು. ಬೇಡ ಬೇಡ ಎನ್ನುತ್ತಲೇ ಸುಮಾರು ದೂರ ಬಂದಿದ್ದೆ. ಇನ್ನು ಸಾಕು ಹಿಂದಕ್ಕೆ ಹೋಗೋಣ ಎಂದೆನಿಸಿತು.
ಐ ಡೋಂಟ್ ನೋ, ವಾಟ್ ಇಸ್ ಪುಶಿಂಗ್ ಮಿ ಟುಡೇ, ಲೆಟ್ಸ್ ಗೋ ಲಿಟ್ಟ್ಲ್ ಫ಼ರ್ದರ್... ಮನಸ್ಸು ಹೇಳುತ್ತಿತ್ತು.
ಇನ್ನೊಂದು ಕಿ.ಮಿ. ನಡೆದರೆ ಗುಡ್ಡ ಸಿಗುತ್ತದೆ, ಗುಡ್ಡ ಹತ್ತಿಯೇ ಬಿಡೋಣ. ಕೊಡೆಕಲ್ಲು ನೋಡಿಯೇ ಬಿಡೋಣ ಎಂದುಕೊಳ್ಳುತ್ತಲೇ ನಡೆಯುತ್ತಿದ್ದೆ. ತರಗೆಲೆಗಳ ಮೇಲೇ ನಡೆಯಬೇಕಿತ್ತು, ಎಲೆಗಳ ಮೇಲೆ ನಡೆಯುವಾಗ ಬರುತ್ತಿದ್ದ ಸದ್ದು ನನಗೇನೆ ಭಯಾನಕವಾಗಿ ಕೇಳುತ್ತಿತ್ತು. ದೂರದಲ್ಲಿ ಆಗಾಗ್ಗೆ ಹಕ್ಕಿಗಳ ಕೂಗು ಬಿಟ್ಟರೆ ಬೇರೇನೂ ಕೇಳುತ್ತಿರಲಿಲ್ಲ. ಸುತ್ತಲಿನ ಪರಿಸರದಲ್ಲಿ ನಾನೊಬ್ಬನೆ ಎನ್ನುವ ಭೀತಿ. ಸಾಮಾನ್ಯವಾಗಿ ಮಧ್ಯಾಹ್ನ ನಂತರ ಹವಾಮಾನ ಬಲು ಬೇಗ ಬದಲಾಗುತ್ತದೆ. ಭಯದ ನಡುವೆಯೇ ಮೊಬೈಲ್‍ನಿಂದ ವಿಡಿಯೋ ಮಾಡುತ್ತಿದ್ದೆ. ಒಳ್ಳೆಯ ಸಮಯದಲ್ಲಿ ವಿಡಿಯೋ ಮಾಡುತ್ತಿದ್ದೇನೆ, ಬೆಳಗಿನಿಂದ ಯಾಕೆ ನೆನಪೇ ಬರಲಿಲ್ಲ. ಇಷ್ಟೊಂದು ಎತ್ತರದಲ್ಲಿ, ಮಧ್ಯಾಹ್ನ ಸಮಯದಲ್ಲಿ ಹಕ್ಕಿಗಳ ಕೂಗನ್ನು ಕೇಳಿರಲಿಲ್ಲ ಎಂದೆಲ್ಲ ಆಲೋಚಿಸುತ್ತಿರಬೇಕಾದರೆ, ಒಂದು ವಿಕಾರವಾದ ಕೂಗಿಗೆ ಮತ್ತೊಮ್ಮೆ ಭಯವಾಗಿ ಬೆಚ್ಚಿಬಿದ್ದೆ. ಮೈಯೆಲ್ಲಾ ಜುಂ... ಮತ್ತೆ ಧೈರ್ಯ ಬರಲು ಒಂದು ನಿಮಿಷವೇ ಬೇಕಾಯ್ತು. ಧ್ವನಿ ಬಂದತ್ತಾ ಕಾಡಿನ ಕಡೆ ನೋಡಿದೆ, ಏನೂ ಕಾಣಿಸಲಿಲ್ಲ, ಕತ್ತಲೆಯ ಕಾನಿನೊಳಗಿಂದ ಎಲೆಗಳು ಮಾತ್ರ ಅಲುಗಾಡುತ್ತಿದ್ದವು. ಯಾವುದೋ ದೊಡ್ಡ ಹಕ್ಕಿಯೊಂದು ಕೂಗಿರಬೇಕು, ಹುಲಿಯೋ ಚಿರತೆಯೋ ಕ್ರೂರಪ್ರಾಣಿ ಅಲ್ಲ ಎಂದು ಸಮಧಾನಿಸಿಕೊಂಡೆ. ಭಯವಾಗಿದ್ದಂತೂ ನಿಜ. ಆಗಲೇ ಜೀರುಂಬೆಯೊಂದು ಸದ್ದು ಮಾಡಿತು. ಬರಬರುತ್ತಾ ಆ ಜಾಗವೆಲ್ಲಾ ಜೀರುಂಡೆಗಳ ಕೀರಲು ಧ್ವನಿಯಿಂದ ತುಂಬಿಹೋಯಿತು. ಒಂದು ಜೀರುಂಬೆ ಕೂಗಿದರೆ ಇಡೀ ಕಾಡೇ ಸ್ಪಂದಿಸಿ ಗುಂಗಿಡುತ್ತದೆ. ಬೈ ದ ವೇ, ಅದು ಅವುಗಳ ಮೇಟಿಂಗ್ ಕಾಲ್ ಅಂತೇ!
ಕತ್ತಲು ಮತ್ತು ದಟ್ಟ ಕಾಡು, ಜೀರುಂಬೆ ಸದ್ದು ಆನೆಗಳ ಭಯಕ್ಕಿಂತ ಜಾಸ್ತಿಯಾಗಿತ್ತು. ಫಿಯರ್ ವರ್ಸಸ್ ಸ್ಟಾಮಿನ... ಹೂ ವನ್... ಏನೋ ಗೊತ್ತಿಲ್ಲ, ದಿಸ್ ಇಸ್ ಅಡ್ವೆಂಚರ್ ಎನಫ್... ಭಯದ ನಡುವೆ ನಾನು ಅಷ್ಟು ದೂರ ನಡೆದದ್ದು ಸಾಕೆನ್ನಿಸಿತು. ಕೊಡೆಕಲ್ಲು ನೋಡಲಾಗದೆ ಹಿಂದಿರುಗಲೇ ಬೇಕಾಯ್ತು. (ನಾನು ನಡೆದ ದಾರಿ ಬೇರೆಯದೇ ಆಗಿತ್ತು. ಬಹುಶಃ ಇದು ಬಾಳೆಕಲ್ಲು ಗುಡ್ಡದ ಹಾದಿಯಿರಬಹುದು).
ಜನವರಿ ಶುರುವಾಗಲು ಇನ್ನು ಒಂದು ವಾರವಿತ್ತು, ಅದಾಗಲೇ ಕಾಡೆಲ್ಲಾ ಕಂದು ಬಣ್ಣಕ್ಕೆ ತಿರುಗಿದೆ. ಗುಡ್ಡದ ನೋಟವೂ ಅಷ್ಟೇನೂ ಚೆನ್ನಾಗಿರುವುದಿಲ್ಲ. ಮತ್ತೊಮ್ಮೆ ಗೆಳೆಯರೊಂದೆಗೆ ಬರಲೇಬೇಕು ಎಂದಂದು ಕೊಂಡು ನಾನು ವಾಪಸ್ಸಾದೆ. ಈಗ ಇಳಿಯುವ ದಾರಿ ಸುಲಭವಾದರೂ, ಜಾರುವ ಭಯವಂತೂ ಇದ್ದೇ ಇರುತ್ತದೆ. ಇಳಿಯುವಾಗ ಮಂಡಿಗಳ ಮೇಲೆ ದೇಹದ ಭಾರ ಬಿದ್ದು ನೋವಾಗಲು ಶುರುವಾಗುತ್ತದೆ, ಬ್ಯಾಲೆನ್ಸ್ ತಪ್ಪುತ್ತದೆ. ಮೈಯೆಲ್ಲಾ ಬಿಸಿಯಾಗಿ, ಬೆವರ ವಾಸನೆ ಬೇಸರಿಸುತ್ತದೆ. ಇಳಿಯುವಾಗ ಶೂಗಳೊಳಗೆ ಬೆರಳುಗಳು ಒತ್ತಿಕೊಂಡು/ಮಡಚಿಕೊಂಡು ನೋವಾಗುತ್ತದೆ. ಹಿಂದೆ ಬ್ಯಾಗ್ ಭಾರಕ್ಕೆ ಬೆನ್ನು, ಭುಜಗಳು ನೋವಾದರೆ, ಮುಂದೆ ಜೋತಾಡಿಸಿದ ಕ್ಯಾಮೆರ ಕತ್ತನ್ನು ನೋಯಿಸುತ್ತದೆ. ಟ್ರೆಕ್ ನಂತರವೂ ವಾರವೆಲ್ಲಾ ಕಾಲುಗಳು ನೋಯುತ್ತಿರುತ್ತದೆ... ಇಷ್ಟೆಲ್ಲಾ ತಾಪತ್ರಯಗಳು ಮುಂದಿನ ಟ್ರೆಕ್ ಪ್ಲಾನ್ ಮಾಡುವಾಗ ನೆನಪಿಗೆ ಬರುವುದೇ ಇಲ್ಲ, ಟ್ರೆಕ್‍ನ ಸ್ಪಿರಿಟ್ ಅಂತಹುದು! ಮನೆಗೆ ಬಂದು ಫ಼ೋಟೋಗಳನ್ನು ನೋಡುವಾಗ, ಗೆಳೆಯರೊಂದಿಗೆ ಹಂಚಿಕೊಂಡಾಗ ಅವೆಲ್ಲಾ ಮರೆಯಾಗುತ್ತವೆ. ಹೊಸ ಕಥೆಗಳು ಹುಟ್ಟುತ್ತವೆ ಮತ್ತೆ ಟ್ರೆಕ್‍ಗೆ ಅಣಿಯಾಗುತ್ತೇವೆ. WHO WILL WIN NEXT: FEAR OR STAMINA?



Comments