೧. ನೀ ಎದುರಿಗೆ ಬಂದಾಗ ನೋಟ ಎದುರಿಸದಾದೆ ತಲೆತಗ್ಗಿಸಿ ತುಟಿಯಮೇಲೆ ತಂದುಕೊಂಡ ನಗೆಯನ್ನು ನಿನ್ನ ತುರುಬಿನಲ್ಲಿಟ್ಟ ಮಲ್ಲಿಗೆಗಳು ನೋಡಿ ಅಣಕಿಸಿವೆ. ಆ ಅನುಭೂತಿಯನ್ನು ನಾನೆಂತು ತಲುಪಿಸಲಿ ಆಕೆಗೆ ಶುದ್ಧ ಬಿಳಿಯ ಹರಳುಗಳೇ ನಿಮ್ಮಂದ-ಸುವಾಸನೆಗಳಿಂದ ನನ್ನೊಲುಮೆಯ ಪಸರಿಸಬಾರದೇ? ೨. ನೀ ಎದುರಿಗೆ ಬಂದಾಗ ಭಾವನೆಗಳ ತಡೆಯದಾದೆ ತಳಮಳಿಸಿ ಲಯ ತಪ್ಪಿದ ಹೃದಯದ ಬಡಿತವ ನಿನ್ನ ದಾವಣಿ ಕಂಡು ಅಣಕಿಸಿದೆ. ಈ ಅನುಭೂತಿಯನ್ನು ನಾನೆಂತು ತಲುಪಿಸಲಿ ಆಕೆಗೆ ತಿಳಿ ನೀಲಿ ರೇಶಿಮೆಯೇ ನಿನ್ನ ನವಿರು-ನುಣುಪುಗಳಿಂದ ನನ್ನೊಲುಮೆಯ ಮುದಗೊಳಿಸಬಾರದೆ? ೩. ನೀ ಎದುರಿಗೆ ಬಂದಾಗ ಮೈ ಮಾಟವ ಹೊಗಳದಾದೆ ಅಳತೆ ಮೀರದ ಅಂದಕೆ ಪುಳಕಿತಗೊಂಡ ಮನವ ನಿನ್ನ ಸೊಂಟದ ಡಾಬು ಕಂಡು ಅಣಕಿಸಿದೆ. ಮರೆಯಲಾಗದ ಈ ಅನುಭೂತಿಯನ್ನು ನಾನೆಂತು ತಲುಪಿಸಲಿ ಆಕೆಗೆ ವೈಯ್ಯಾರದ ಬಂಗಾರವೇ ನಿನ್ನ ಹೊಳಪು-ಒನಪುಗಳಿಂದ ನನ್ನೊಲುಮೆಯ ತಿಳಿಸಬಾರದೇ? ೪. ನೀ ಎದುರಿಗೆ ಬಂದಾಗ ನಿಂತು ಮಾತನಾಡಿಸದಾದೆ ಕಳೆದುಕೊಂಡ ಅವಕಾಶಗಳ ನೆನೆದು ಹಿಂಬಾಲಿಸದ ಕಾಲುಗಳನು ನಿನ್ನ ಕಾಲ್ಗೆಜ್ಜೆಗಳು ನೋಡಿ ಅಣಕಿಸಿದೆ. ಈಗೇನು ಮಾಡಲಿ, ನನ್ನೊಲವ ಹೇಗೆ ತಲುಪಿಸಲಿ ಆಕೆಗೆ ಬೆಳ್ಳಿ ಕಿರುಗೆಜ್ಜೆ ಚುಕ್ಕಿಗಳೇ ನಿಮ್ಮ ಲಯಬದ್ಧ-ನಾದಗಳಿಂದ ನನ್ನಲುಮೆಯ ಪಿಸುಗುಟ್ಟಬಾರದೇ? ...
Posts
Showing posts from 2026