Posts

Showing posts from May, 2026
೧.  ನೀ ಎದುರಿಗೆ ಬಂದಾಗ ನೋಟ ಎದುರಿಸದಾದೆ ತಲೆತಗ್ಗಿಸಿ ತುಟಿಯಮೇಲೆ ತಂದುಕೊಂಡ ನಗೆಯನ್ನು ನಿನ್ನ ತುರುಬಿನಲ್ಲಿಟ್ಟ ಮಲ್ಲಿಗೆಗಳು ನೋಡಿ ಅಣಕಿಸಿವೆ.  ಆ ಅನುಭೂತಿಯನ್ನು  ನಾನೆಂತು ತಲುಪಿಸಲಿ ಆಕೆಗೆ  ಶುದ್ಧ ಬಿಳಿಯ ಹರಳುಗಳೇ ನಿಮ್ಮಂದ-ಸುವಾಸನೆಗಳಿಂದ ನನ್ನೊಲುಮೆಯ ಪಸರಿಸಬಾರದೇ? ೨.  ನೀ ಎದುರಿಗೆ ಬಂದಾಗ ಭಾವನೆಗಳ ತಡೆಯದಾದೆ ತಳಮಳಿಸಿ ಲಯ ತಪ್ಪಿದ ಹೃದಯದ ಬಡಿತವ ನಿನ್ನ ದಾವಣಿ ಕಂಡು ಅಣಕಿಸಿದೆ.  ಈ ಅನುಭೂತಿಯನ್ನು  ನಾನೆಂತು ತಲುಪಿಸಲಿ ಆಕೆಗೆ  ತಿಳಿ ನೀಲಿ ರೇಶಿಮೆಯೇ ನಿನ್ನ ನವಿರು-ನುಣುಪುಗಳಿಂದ ನನ್ನೊಲುಮೆಯ ಮುದಗೊಳಿಸಬಾರದೆ? ೩.  ನೀ ಎದುರಿಗೆ ಬಂದಾಗ ಮೈ ಮಾಟವ ಹೊಗಳದಾದೆ ಅಳತೆ ಮೀರದ ಅಂದಕೆ   ಪುಳಕಿತಗೊಂಡ ಮನವ ನಿನ್ನ ಸೊಂಟದ ಡಾಬು ಕಂಡು ಅಣಕಿಸಿದೆ.  ಮರೆಯಲಾಗದ ಈ ಅನುಭೂತಿಯನ್ನು  ನಾನೆಂತು ತಲುಪಿಸಲಿ ಆಕೆಗೆ  ವೈಯ್ಯಾರದ ಬಂಗಾರವೇ ನಿನ್ನ ಹೊಳಪು-ಒನಪುಗಳಿಂದ ನನ್ನೊಲುಮೆಯ ತಿಳಿಸಬಾರದೇ? ೪.  ನೀ ಎದುರಿಗೆ ಬಂದಾಗ ನಿಂತು ಮಾತನಾಡಿಸದಾದೆ  ಕಳೆದುಕೊಂಡ ಅವಕಾಶಗಳ ನೆನೆದು ಹಿಂಬಾಲಿಸದ ಕಾಲುಗಳನು ನಿನ್ನ ಕಾಲ್ಗೆಜ್ಜೆಗಳು ನೋಡಿ ಅಣಕಿಸಿದೆ.  ಈಗೇನು ಮಾಡಲಿ, ನನ್ನೊಲವ ಹೇಗೆ ತಲುಪಿಸಲಿ ಆಕೆಗೆ  ಬೆಳ್ಳಿ ಕಿರುಗೆಜ್ಜೆ ಚುಕ್ಕಿಗಳೇ ನಿಮ್ಮ ಲಯಬದ್ಧ-ನಾದಗಳಿಂದ ನನ್ನಲುಮೆಯ ಪಿಸುಗುಟ್ಟಬಾರದೇ? ...