ಮಳೆ ಹುಟ್ಟುವ ನಾಡಿಗೆ:

  ನಮ್ಮ ಮಲೆನಾಡಿನಲ್ಲಿ ಮಳೆಯ ಆನಂದ ಹೊಂದುವುದೇ ಒಂದು ಸಾಹಸ ಎಂತಂದುಕೊಂಡು ಜುಲೈ ತಿಂಗಳ ಆದಿಯಲ್ಲಿ ನಾವು ಮೂಡಿಗೆರೆಯ ಕಡೆಗೆ ಹೊರೆಟೆವು. ಬಹಳ ದಿನಗಳಿಂದಲೂ ಚಾರಣಕ್ಕೆ ಹೊಗಲಾಗಿರಲಿಲ್ಲ, ಎತ್ತೊ ಒಂದತ್ತ ತೊಲಗಿ ಹೋಗಬೇಕೆಂದು ನಿರ್ಧರಿಸಿ ಮೂಡಿಗೆರೆ ತಲುಪುವವರೆಗೂ ನಮ್ಮ ಕಾರ್ಯಕ್ರಮ ನಿಗದಿ ಮಾಡಿಕೊಂಡಿರಲಿಲ್ಲ. ಹಾಸನ ದಾಟಿ ಚಿಕ್ಕಮಗಳೂರು ತಲುಪುವ ದಾರಿಯಲ್ಲಿ ದೊಡ್ಡಗದ್ದುವಳ್ಳಿಯಲ್ಲಿ ಸ್ವಲ್ಪ ನಿಲ್ಲಿಸಿ, ಹತ್ತಿರದ ಹೊಯ್ಸಳರ ಕಾಲದ ದೇವಸ್ಥಾನವೊಂದನ್ನು ತಲುಪಿದೆವು. ಬಹಳ ಸುಂದರವಾದ ದೇವಾಲಯದಲ್ಲಿ, ಕಾಳಿ ಸೌಮ್ಯರೂಪಿಯಾಗಿ ನೆಲೆಯಾಗಿದ್ದಾಳೆ. ಮುಖಮಂಟಪ ದಾಟಿ ಒಳಹೊಕ್ಕರೆ ನಾಲ್ಕು ದಿಕ್ಕುಗಳಲ್ಲು ಪ್ರಮುಖ ದೇವರುಗಳ ಸುಂದರ ವಿಗ್ರಹಗಳಿವೆ. ಎಡ ಭಾಗದ ಗರ್ಭ ಗುಡಿಯಲ್ಲಿ ಕಾಳಿ ಇದ್ದರೆ, ಎದುರಿಗೆ ವಿಷ್ಣುವಿನ ಮೂರ್ತಿ ಇದೆ. ಕಾಳಿಯ ಕೋಪವನ್ನು ನಿಗ್ರಹಿಸಲು ವಿಷ್ಣು ಎದುರಿಗಿದ್ದರೆ, ಲಕ್ಷ್ಮಿಯ ಎದುರಿಗೆ ಶಿವಲಿಂಗದ ಪ್ರತಿಸ್ಟಾಪನೆಯಿದೆ. ಕೊಲ್ಲಾಪುರದ ನಂತರ ನಿಂತ ಲಕ್ಷ್ಮಿ ದೇಗುಲ ಇದೊಂದೇ ಅಂತೆ. ಮೇಲ್ಚಾವಣಿಯಲ್ಲಿ ಅಷ್ಟದಿಕ್ಕುಗಳಲ್ಲಿ ಬ್ರಹ್ಮ, ವಿಷ್ಣು ವಿವಿಧ ದೇವರುಗಳು ತಮ್ಮ ವಾಹನಗಳ ಮೇಲೆ ರಾರಾಜಿಸಿದ್ದಾರೆ. ಅವುಗಳ ವಿವರಗಳನ್ನು ನಾವೀಗಾಗಲೆ ಮರೆತಿದ್ದೇವೆ. ಚಿಕ್ಕಮಗಳೂರಿನ ಕಡೆ ಹೋಗುವಾಗ ಸಮಯ ಮಾಡಿಕೊಂಡು ಹಲವು ರೀತಿಗಳಿಂದಲೂ ವಿಶಿಷ್ಟವಾದ ಈ ದೇವಸ್ಥಾನವನ್ನು ಒಮ್ಮೆ ನೋಡಲೇಬೇಕಾದದ್ದು.


   ನಮ್ಮ ಮುಂದಿನ ನಿಲುಗಡೆ, ಮೂಡಿಗೆರೆಯ ಹ್ಯಾಂಡ್‍ಸ್ಟಾಪ್ ಬಳಿಯೇ ಇರುವ ಕೀರ್ತಿಶೇಷರಾದ ತೇಜಸ್ವಿಯವರ ಮನೆ. ಮನೆಯಲ್ಲಿ ಯಾರೂ ಇಲ್ಲದೆ, ತೇಜಸ್ವಿಯವರನ್ನು ಕಳೆದುಕೊಂಡ ಮನೆ "ನಿರುತ್ತರ"ವೇ ಆಗಿತ್ತು. ಸುಂದರವಾದ ಪ್ರಕೃತಿಯ ನಡುವಿನ ಮನೆಯ ಮುಂದಿನ ಹಲವಾರು ವಿವಿಧ ಬಗೆಯ ಹೂ ಗಿಡ ಬಳ್ಳಿಗಳು ಮಹಾ ಚೇತನವೊಂದು ಬಾಳಿದ ರೀತಿಯನ್ನು ನಿರ್ದೇಶಿಸಿದಂತಿತ್ತು. ಸರಿಯಾಗಿ ಇದೇ ಒಂದು ವರ್ಷದ ಹಿಂದೆ ತೀರ್ಥಹಳ್ಳಿಗೆ ಭೇಟಿ ನೀಡಿದಾಗ ಕುವೆಂಪು ಅವರ "ಕವಿಶೈಲ" ನೋಡಿ ಬಂದಿದ್ದನ್ನು ನೆನಪಿಸಿಕೊಳ್ಳುತ್ತಾ ಮುಂದೆ ನಡೆದೆವು.

   ಮುಂದುವರೆದ ನಾವು ಮಾರ್ಗ ಮಧ್ಯೆ ದಾರಿ ಕೇಳಲೆಂದು ನಿಲ್ಲಿಸಿದೆವು. ಅಲ್ಲಿ ಇಬ್ಬರು ನಿಂತಿದ್ದರು, ದಾರಿ ತಿಳಿದುಕೊಂಡು ಮಳೆಯ ಬಗ್ಗೆ ವಿಚಾರಿಸಿದಾಗ "ಮಳೆ ಹುಟ್ಟುವುದೇ ಅಲ್ಲಿ" ಎಂದಾಗ ನಾವು ಏನು ಹೇಳುವುದೇ ತಿಳಿಯದಾಗಿತ್ತು, "ಸರಿ ಸರ್, ಥ್ಯಾಂಕ್ಸ್" ಅಂದು ಮತ್ತೆ ಕಾರು ಏರಿದಾಗ ನಮಗೆ ದಾರಿಯುದ್ದಕ್ಕು ಅವೇ ಮಾತುಗಳು ಪುನರಾವರ್ತನೆಯಾಗುತ್ತಿದ್ದವು ಮತ್ತು ನಮ್ಮ ಉದ್ದೇಶ ಕೂಡ ಅದೇ ಆಗಿತ್ತು, ನಮ್ಮ ಎಂದಿನದೋ ಒಂದು ಆಸೆ ಈಡೇರುವುದರಲ್ಲಿತ್ತು.



   ಮೂಡಿಗೆರೆಯಿಂದ ಹೊಸಕೆರೆಯ ದಾರಿಯಲ್ಲಿ ಬಲಕ್ಕೆ ತಿರುಗಿ ಹೋದರೆ ಭೈರಾಪುರವೆಂಬ ಊರು, ಅಲ್ಲಿ ಭೈರವೇಶ್ವರನ ಒಂದು ಪುರಾತನ ಗುಡಿಯಿದೆ. ಗುಡಿಯ ಹಿಂಭಾಗ ಗುಡ್ಡವೊಂದಿದ್ದು, ಅದನ್ನು ಶಿಶಿಲದ ಗುಡ್ಡ, ಎತ್ತಿನ ಭುಜ ಗುಡ್ಡ ಎಂದು ಕರೆಯುತ್ತಾರೆ. ಈ ಬೆಟ್ಟಕ್ಕೆ ಧರ್ಮಸ್ಥಳ-ಕೊಕ್ಕಡ-ಶಿಶಿಲ ಮಾರ್ಗವಾಗಿ ಬಂದು ಹೊಳೆಗಂಡಿ ಕಡೆಯಿಂದಲೂ ಗುಡ್ಡಕ್ಕೆ ಬರಬಹುದು. ಇಲ್ಲಿಂದಲೇ ಅಮೇದಿಕಲ್ಲು ಗುಡ್ಡಕ್ಕೆ ಚಾರಣಕ್ಕೆ ಹೋಗುವುದು. ನಾವು ಭೈರಾಪುರದ ಹಾದಿಗೆ ಬರುವವರೆಗೂ, ಅಲ್ಲಿಯವರೆಗೂ ಬರಿಯ ಮೋಡ ಮುಚ್ಚಿಕೊಂಡಿದ್ದು ದಾರಿ ಸುಗಮ ಎನಿಸಿತ್ತು. ಶುರುವಿನಲ್ಲಿ ಹನಿಯತೊಡಗಿದ ಹಾಗೆ, ದಾರಿ ಸವೆಸಿದ ಹಾಗೆ ಮಳೆ ಜೋರಾಗುತ್ತಿತ್ತು. ನಾವು ಗುಡಿಯ ಬಳಿಗೆ ಸಂಜೆ ಐದಕ್ಕೆ ಬಂದಿದ್ದೆವು, ಮಳೆ ಮತ್ತು ಮಂಜಿನ ನಡುವೆ, ಸುತ್ತಲೂ ಕಾಡಿನ ನಡುವೆ ದೇವಾಲಯ ಭವ್ಯವಾಗಿ ನಿಂತಿತ್ತು, ಆದರೆ ಶಿಶಿಲದ ಗುಡ್ಡ ಮಾತ್ರ ಕಣ್ಮರೆಯಾಗಿತ್ತು. ಅಂದು ಅಲ್ಲಿ ರಾತ್ರಿ ಕಳೆಯಲು ಜಾಗ ಹುಡುಕತೊಡಗಿದೆವು. ಪಕ್ಕದ ಊರಿನಲ್ಲಿ ಯಾರು ಪರಿಚಯವಿರದೆ, ರಾತ್ರಿಯ ಮಳೆಗೆ ನಮ್ಮ ಟೆಂಟುಗಳು ತಡೆಯುವ ಭರವಸೆಯಿಲ್ಲದೆ ಹತ್ತಿರದ ಶಾಲೆಯೊಂದರ ಪಡಸಾಲೆಯಲ್ಲಿ ತಂಗುವುದೆಂದು ನಿರ್ಧಾರ ಮಾಡಿದೆವು. ಆದರೆ, ಇವೆಲ್ಲದರ ನಡುವೆ ತುಂಬಾ ಬೇಕಾದ ರಾತ್ರಿಯ ಊಟದ ಬ್ರೆಡ್ ಮತ್ತು ಇತರ ತಿನಿಸುಗಳ ಪ್ಲಾಸ್ಟಿಕ್ ಚೀಲವನ್ನು ಮನೆಯಲ್ಲಿಯೇ ಮರೆತು ಬಂದಿದ್ದೆವು!

    ಅಲ್ಲಿಂದ ಹೊಸಕೆರೆ ಸ್ವಲ್ಪ ದೂರವೇ, ಅಲ್ಲಿ ಊಟದ ವ್ಯವಸ್ಥೆ ಏನಾದರು ಆಗಬಹುದು, ಮತ್ತು ಉಳಿದುಕೊಳ್ಳಲು ಸ್ಥಳವು ಸಿಗಬಹುದೆಂದು ಅಲ್ಲಿಗೆ ಹೋದಾಗ ಆ ಇಡೀ ಊರಿಗೆ ಒಂದೇ ಒಂದು ಅಂಗಡಿ ಇತ್ತು. ಟೀ ಕೂಡ ಸಿಗುವ ಹಾಗಿರಲಿಲ್ಲ. ಯಾವುದೋ ಚಿಕ್ಕ ಚಿಕ್ಕ ಬಿಸ್ಕತ್ತು ಮತ್ತು ಬಾಳೆಹಣ್ಣುಗಳು ಮಾತ್ರವಿದ್ದು ಊಟ ಮತ್ತು ಬೆಳಗಿನ ತಿಂಡಿಗೆ ಹೇಗೆ ಯೋಚನೆಯಾಯಿತು. ಒಂದಿಬ್ಬರು ಮೂಡಿಗೆರೆಗೆ ಹೋಗಿ ರಾತ್ರಿಯಿದ್ದು ಬರೋಣವೆಂದರು. ಮತ್ತೆ ೨೦ ಕಿ.ಮಿ. ಹೋಗಿ ಬೆಳಿಗ್ಗೆ ಬೇಗ ಎಂದರೂ ತಡವಾಗಿ ಬಂದು, ಅಲ್ಲಿಂದ ನಾವು ದೇವರಮನೆ ನೋಡಲು ಹೋಗುವುದು ನನಗಿಷ್ಟವಿರಲಿಲ್ಲ. ಇಲ್ಲಿಯೇ ಇರುವ ಬಿಸ್ಕತ್ತು, ಬಾಳೆಹಣ್ಣು ತಿಂದು ಮಲಗಿ, ಇದೊಂದು ಉಪವಾಸದ ಪ್ರವಾಸ ಮಾಡಿದರಾಯಿತು ಎಂದೆ. ಗೆಳೆಯರಿಗೆ ರಾತ್ರಿ ನಿದ್ದೆಯ ಚಿಂತೆ, ನಾನು ಸರಿಯಾಗಿ ನಿದ್ದೆ ಮಾಡದೆ ತಿಂಡಿ ತಿನ್ನದೇ ಕಾರು ಚಲಾಯಿಸಬಲ್ಲೆನೆ ಎನ್ನುವ ಅನುಮಾನ. ನಾವು ನಿಂತಿದ್ದ ಅಂಗಡಿಯ ಬಳಿ ಅದಾಗಲೇ ಸ್ಥಳಿಯರ ಗುಂಪು ಸೇರಿತ್ತು. ಬೀಡಿ ಸೇದುತ್ತಾ, ಕವಳ ಅಗಿಯುತ್ತಾ ನಮ್ಮ ಪಾಡನ್ನು ಕೇಳುತ್ತಾ ಅದೂ ಇದೂ ಸಲಹೆಗಳನ್ನು ನೀಡುತ್ತಿದ್ದರು. ಅವರಲ್ಲಿ ಒಬ್ಬ ಬೆಂಗಳೂರಿನಲ್ಲಿ ಸ್ವಲ್ಪ ದಿನ ಇದ್ದನಂತೆ, ಇಲ್ಲೇ ಮುಂದೆ ಬೆಟ್ಟದ ಭೈರವೇಶ್ವರನ ದೇವಸ್ಥಾನವಿದೆ, ಅಲ್ಲಿಯ ಭಟ್ಟರು ನಿಮಗೆ ಏನಾದರು ವ್ಯವಸ್ಥೆ ಮಾಡಿಯಾರು, ನಿಮಗೂ ದೇವಸ್ಥಾನ ನೋಡಿದ ಹಾಗಾಗುತ್ತೆ, ಬೆಟ್ಟದ ಮೇಲೆ ಸುಂದರ ಪರಿಸರದಲ್ಲಿ ದೇಗುಲವಿದೆ. ಹೋಗಿಬನ್ನಿ, ಅಲ್ಲೆಲ್ಲೂ ವ್ಯವಸ್ಥೆಯಾಗದಿದ್ದರೆ ಇಲ್ಲಿಯೇ ಶಾಲೆಯಲ್ಲಿ ಉಳಿದುಕೊಳ್ಳಬಹುದು. ಬೆಂಗಳೂರಿನಿಂದ ಒಂಬತ್ತು ಗುಡ್ಡಕ್ಕೆ ಬರುವ ಚಾರಣಿಗರು ಹಲವರು ಇಲ್ಲಿಯೇ ಉಳಿದುಕೊಳ್ಳುವುದುಂಟು ಎಂದ.

    ಸರಿ, ನೋಡೋಣ ಎಂದು ಆಲೋಚಿಸದೇ ಅಲ್ಲಿಗೆ ಹೊರಟೆವು. ಮಳೆ ಜಿನುಗುತ್ತಲೇ ಇತ್ತು, ಇಲ್ಲೆ ಹತ್ತಿರದಲ್ಲೇ ಎಂದರಾದರೂ ಸ್ವಲ್ಪ ದೂರವೇ ಇತ್ತು, ಏರಿನ ದಾರಿಯಲ್ಲಿ ಒಂದು ಮತ್ತು ಎರಡನೇ ಗೇರ‍್ ನಲ್ಲಿಯೇ ಹತ್ತುತ್ತಿದ್ದಂತೆ ಮಳೆಯು ಜೋರಾಗುತಿತ್ತು, ಕೇವಲ ಮುವ್ವತ್ತು ನಲ್ವತ್ತು ಅಡಿಗಳ ನಂತರ ದಾರಿಯೂ ಕಾಣಿಸುತ್ತಿರಲಿಲ್ಲ. "ನೋಡೋ ಮಳೆ ಹುಟ್ಟುವುದೇ ಇಲ್ಲಿ! ಮಲೆನಾಡಿನ ಮಳೆಯ ಅನುಭವ ಅನುಭವಿಸು; ಇನ್ನು ನಾಳೆ ಶಿಶಿಲಗುಡ್ಡಕ್ಕೆ ಮಳೆಯಲಿ, ಕೆಸರಿನಲ್ಲಿ ಜಿಗಣೆಗಳ ರಾಶಿಯಲ್ಲಿ ರಕ್ತದಾನ ಶಿಬಿರ ಮಾಡುವಿಯಂತೆ", ಎಂದು ಮಂಜು ಅಂದ್ರೆ, ಗೌಡ್ರು: "ಊರು, ನಾಡು ಬಿಟ್ಟು ನಾಲ್ಕು ಜನ, ಮಳೆಯಲಿ ಕಾಡಿನಲಿ ನಡೆದರು, ಜಿಗಣೆಗಳಿಗೆಲ್ಲ ರಕ್ತದಾನ ಮಾಡಿದರು... ಹೀಗೂ ಉಂಟೇ... ನೋಡಿ ಬ್ರೇಕ್ನ ನಂತರ!" ಅಂತ ಟಿ.ವಿ.೯ನ ಅನುಕರಣೆ ಮಾಡಿದರು. ಜಿಗಣೆಗಳಿಗೆ ರಕ್ತದಾನ ಶಿಬಿರದ ಪದ ಬಳಕೆ ನಮಗೆಲ್ಲಾ ಇಷ್ಟವಾಯಿತಾದರೂ ಗೊತ್ತಿರುವ ಯಾರು ಇಲ್ಲಿ ಮಳೆಗಾಲದಲ್ಲಿ ಚಾರಣ ಮಾಡುವುದೇ ಇಲ್ಲ, ಅದರಲ್ಲು ಸ್ಥಳಿಯರು ಜಿಗಣೆಗಳಿಗೆ ತುಂಬಾ ಕಾಳಜಿ ವಹಿಸುತ್ತಾರೆ. ನಾವೋ ಗೊತ್ತು ಗುರಿಯಿಲ್ಲದೇ ಉಪವಾಸ ಚಾರಣದ ಅಂದಾಜು ಮಾಡುತ್ತಾ ಹೊರೆಟೆವು. ಕೆಲವು ಮನೆಗಳು ಹತ್ತಿರ ವಾದರೂ ಭಟ್ಟರ ಮನೆಯ ಗುರುತಿಸಲಿಲ್ಲ, ಸಂಜೆಯ ಮಳೆಯ ಸಮಯದಲಿ ಯಾರು ಹೊರಗಿರಲಿಲ್ಲ, ದೇಗುಲದ ಬಳಿ ಹೋಗೋಣ ಎಂದರು, ಅಲ್ಲಿಂದ ಬಹಳ ಏರಿನ ದಾರಿಯ ತಿರುವಿನಲ್ಲಿ ದೇವಸ್ಥಾನವಿತ್ತು. ಜನರುಯಾರೂ ಇರಲಿಲ್ಲ. ಭಟ್ಟರ ಸುಳಿವು ಇರಲಿಲ್ಲ.


    ಅಲ್ಲಿಯ ದೇವಸ್ಥಾನ, ಹೆಸರಿನಂತೇ ಬೆಟ್ಟದ ತುದಿಯಲ್ಲಿ, ಸುತ್ತಲೂ ಕಾಡಿನಿಂದ ಕೂಡಿ ಮಳೆ ಮತ್ತು ಮಂಜಿನ ನಡುವೆ ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಆನಂದ ನೀಡಿತು. ಸುಮಾರು ಸಮಯ ಫೊಟೊ, ವಿಡಿಯೋ ತೆಗೆದುಕೊಳ್ಳುತ್ತಾ, ಬೆಟ್ಟದ ತುದಿಯಾದ್ದರಿಂದ ಫೋನ್ ನೆಟ್‍ವರ್ಕ್ ದೊರೆತು ಮನೆಯವರೆನ್ನೆಲ್ಲಾ ಮಾತನಾಡಿಸಿ, ರನ್ನಿಂಗ್ ಕಾಮೆಂಟರಿ ನೀಡಿದರು. ಶಿವನ ದರ್ಶನ ದೊರೆಯಲಿಲ್ಲವಾದರೂ, ಕ್ಷೇತ್ರದ ಸ್ಥಳ, ಸುತ್ತಲ ವಿಹಂಗಮ ನೋಟ, ಮಂಜು ಮಿಶ್ರಿತ ಮಳೆ ನಮ್ಮನ್ನೆಲ್ಲ ಮೋಡಿ ಮಾಡಿತ್ತು, "ಶಿವಪ್ಪಾ, ನೀನು ಎಲ್ಲೆಲ್ಲಿ ಇದ್ದೀಯಪ್ಪಾ" ಉದ್ಗಾರ ಅಂದುಕೊಳ್ಳದೆಯೇ ಬಂದಿತ್ತು. ಆಷಾಡದ ಗಾಳಿಯೂ ಜೋರಾಗಿ ಬೀಸುತ್ತಿದ್ದುದರಿಂದ ಚಳಿಯಾಗಿ, ಬೆಚ್ಚಗಿನ ನಮ್ಮೆಲ್ಲಾ ಹಳೆಯ ಚಾರಣದ ನೆನಪುಗಳು ಒಂದೊಂದಾಗಿ ಹೊರಬರುತ್ತಿದ್ದವು, ಈ ಚಳಿಯ ತಾಳಿದವನು ಹಿಮಾಲಯದಲ್ಲಿ ಬದುಕಿಯಾನು ಎಂದು ಅನ್ನುತ್ತಿದ್ದಂತೆ ಹಿಮಾಲಯದ ಚಾರಣದ ನೆನಪುಗಳು ಬರತೊಡಗಿದವು, ನಮಗೆ ರಾತ್ರಿಯ ಊಟದ, ನಿದ್ದೆಯ ನೆನಪು ಕೂಡ ಸುಳಿಯದಷ್ಟು. ಅಷ್ಟರ ಮಟ್ಟಿಗೆ ನಾವು ಈ ಸ್ಥಳದ ಖುಶಿಯನ್ನುನುಭವಿಸುತ್ತಿದ್ದೆವು.

    ಹಿಂದುರುಗಿ ಹೊಸಕೆರೆಯ ಅಂಗಡಿಯ ಬಳಿ ಬಂದು ರಾತ್ರಿ ಅಲ್ಲಿನ ಶಾಲೆಯ ಬಳಿ ಉಳಿದುಕೊಳ್ಳುವುದಾಗಿ ನಿರ್ಧರಿಸಿದೆವು. ಅಲ್ಲಿದ್ದವರಲ್ಲೊಬ್ಬ ಯಾರೋ ತಿಳಿವವರ ಮನೆಯಲ್ಲಿ ಟೀ ಆದರೂ ಮಾಡಿಸಿಕೊಡುವುದಾಗಿ ಹೇಳಿ ಹೋದ. ಹೋಗುತ್ತಾ ಊಟಕ್ಕೆ ಏನಾದರು ಮಾಡಿಕೊಡುತ್ತಾರ ಕೇಳಿ ನೋಡುತ್ತೇನೆ, ಏನು ಬೇಕು ಅಂದ. ಯಾವುದಾದರೂ ಸರಿ, ಅನ್ನ ಸಾಂಬಾರು ನಡೆಯುತ್ತೆ ಎಂದೆ. ಇತ್ತ ಗೆಳೆಯರಿಗೆ ಹೇಳಿ ಸಾಮಾನುಗಳನ್ನು ಕಾರಿನಿಂದ ಇಳಿಸುತ್ತಾ ಶಾಲೆಯ ಕಡೆ ನೋಡಿ ಬರೋಣವೆಂದು ಹೋದೆವು, ಶಾಲೆಯ ಒಂದು ಹೊಸ ಕೋಣೆಯನ್ನು ಕಟ್ಟುತ್ತಿದ್ದರು, ಕಿಟಕಿ ಬಾಗಿಲು ಇನ್ನು ಇಟ್ಟಿರಲಿಲ್ಲ, ಹೊಸ ಕೊಠಡಿಯಾದರೂ ಸೂರು ಸ್ವಲ್ಪ ಸೋರುತ್ತಿತ್ತು, ಕಿಟಕಿಯೊಳಗಿಂದ ಮಳೆಯ ಹನಿಗಳು ಉದುರುತ್ತಿದ್ದವು. ಸರಿ, ನಮ್ಮ ಟೆಂಟ್ ಆಚೆ ಬಂತು, ಮನೆಯೊಳಗೊಂದು ಟೆಂಟ್ ಹಾಕಿ ತಂಗುವ ಹೊಸ ತರಹದ ಕ್ಯಾಂಪಿಂಗ್‍ಗೆ ತಯಾರಾದೆವು. ಇತ್ತ ಒಬ್ಬ ಕ್ಯಾಂಪಿಂಗ್ ತಯಾರಾಗುತ್ತಿದ್ದಂತೆ, ಸಿಗಬಹುದಾದ ಅಮೂಲ್ಯ ವಸ್ತುಗಳು; ಅಲ್ಲಲ್ಲ ಪಾನೀಯಗಳ ವಾಸನೆ ಹಿಡಿದಿದ್ದ. ತೀರ ಆಸೆಬುರುಕ ಅದಾಗಲೆ ಲೋಕಲ್ ಸೇವಿಸಿ, ಘಮ್ಮೆನ್ನುತ್ತಿದ್ದ ನೇರ ಬಂದು ನಿಮಗೆ ರಾತ್ರಿಯ ಊಟಕ್ಕೆ ವ್ಯವಸ್ಥೆ ಮಾಡಿದ್ದೇನೆ, ಕುಡಿಯಲು ಲೋಕಲ್ ಬೇಕಾದ್ರೆ ಹೇಳಿ ಎನ್ನುವುದೇ, ನಾವು ಕುಡುಕರು ಎನ್ನುವ ರೀತಿ. ಬೇಡವೆಂದರೂ, ತಗೊಳ್ಳಿ ಸರ್, ತುಂಬಾ ಚೆನ್ನಾಗಿರುತ್ತೆ ಕಿಕ್, ಜೊತೆಗೆ ಆರೊಗ್ಯಕ್ಕೂ ಒಳ್ಳೆಯದು ಎನ್ನುವುದೇ, ಇವನಿಂದ ಬಿಡಿಸಿಕೊಳ್ಳುವುದು ಕಷ್ಟವಾಯಿತು. ಬೆಡಪ್ಪಾ ನಮ್ಮದು ಸ್ವಲ್ಪ ಇದೆ ಎಂದಾಕ್ಷಣ ನೋಡಬೇಕಾಗಿತ್ತು ಆತನ ಆನಂದ... ನಮಗೆ ಅಂತಾ ತಗೊಂಡು ಹೋಗಿದ್ದೆ ಕಡಿಮೆ, ಅದರಲ್ಲೂ ಯಾರು ಅಂತಹ ಸೇವಕರಲ್ಲ... ಮಂಜು ಎರಡು ಟಿನ್ ಬಿಯರ್ ಗೆ ಮಾತ್ರ ಪರ್ಮಿಟ್ ತಗೊಂಡಿದ್ದಾ, ನನಗೆ ಮತ್ತು ಗೌಡ್ರುಗೆ ಒಂದರ್ಧ ಬಾಟ್ಲಿ. ಅದರಲ್ಲಿ ಅರ್ಧ ಆತನಿಗೆ ಮತ್ತು ನಮಗೆ ಊಟದ ವ್ಯವಸ್ಥೆ ಮಾಡಿದವನಿಗೆ ಕೊಟ್ಟ ನಂತರವೇ ನಮಗೆ ಸ್ವಲ್ಪ ಆತನಿಂದ ಬಿಡುಗಡೆ ಸಿಕ್ಕಿದ್ದು.

    ಸಾಮಾನುಗಳನ್ನೆಲ್ಲ ಕಾರಿನಲ್ಲಿ ತುರುಕಿ, ಟೆಂಟನ್ನೆ ಹಾಸಿಕೊಂಡು ನಮ್ಮ ಸರಕುಗಳನ್ನಿಳಿಸ ತೊಡಗಿದೆವು ಚೌಚೌ ನೊಂದಿಗೆ. ಎಂದಿನಂತೆ ಜಯರಾಮ್‍ಗೆ ಒಂದು ಭರ್ಜರಿ ಫಂಟಾ ಪೂರಾ ಬಾಟ್ಲಿ. ಅದಾಗಲೇ ಗೌಡ್ರು ತಲೆ ಮಂಕಿಕ್ಯಾಪ್‍ನೊಳಗೆ ತೂರಿಸಿದ್ದರು, ಜಯರಾಮ್ ಜರ್ಕಿನ್‍ನಲ್ಲಿ ರಾರಾಜಿಸಿದ್ದರು, ನಾವು ಒಳಗೆ ಸ್ವೆಟರ್ ಹಾಕಿಕೊಳ್ಳುತ್ತಿದ್ದೆವು. ನೆನಪುಗಳ ಮಾತುಗಳು ರಂಗೇರುತ್ತಿದ್ದಂತೆ ಆ ಕುಡುಕುನ ಆಸಾಮಿಯು ಪ್ರತ್ಯಕ್ಷ, ನಮ್ಮದು ಕಾಮಾಕ್ಷಿಪಾಳ್ಯದ ಬಳಿಯ ಬಸವೇಶ್ವರ ನಗರ ಎಂದು ಮಂಜು ಅಂದಾಗ, ಕಾಮಾಕ್ಷಿಪಾಳ್ಯದ ಸಂದುಗೊಂದಿಗಳು ತನಗೆ ಗೊತ್ತು, ಮತ್ತು ಅಲ್ಲಿನ ಹಿರಿಕಿರಿಯ ರೌಡಿಗಳ ಹೆಸರುಗಳೆಲ್ಲಾ ಹೇಳುತ್ತಾ ಮಾತನಾಡುತ್ತಲೇ ಇದ್ದ. ನಮಗೆ ನೆಮ್ಮದಿಯ ಆ ಏಕಾಂತದ, ಜೀರಿಡುವ ಸದ್ದುಗಳ, ನೀರವತೆಯ ಭಂಗವಾಗಿ ಗದುರಿಸಿ, ನಮ್ಮನ್ನು ಬಿಟ್ಟು ಹಾಕು, ನಮದೆ ಸಾಕಷ್ಟಿದೆ ಎಂದು ಹೊರದೂಡಿದೆ. ಎಲ್ಲೋ ಸ್ವಲ್ಪ ಓಲಾಡುವ ಭಾವನೆಗಳೊಂದಿಗೆ ನಮ್ಮ ಮಾತುಗಳಲ್ಲಿ, ನೆನಪಿಂದಾಗುತ್ತಿದ್ದ ಖುಶಿಗಳಲ್ಲಿ, ಆಗಾಗ ಮಿಂಚು ಸುಳಿಯುತ್ತಿತ್ತು.

    ನಮಗೆ ಊಟ ಮಾಡಿಕೊಡಲು ಒಪ್ಪಿದವರು ಒಂದು ಹೆಂಗಸು, ಹೆಸರು ಶಾಂತಮ್ಮ, ಮಂಗಳೂರಿನವರು, ಇಲ್ಲಿಯೇ ಒಂದಷ್ಟು ಕಾಫಿ ತೋಟ ಮಾಡಿಕೊಂಡಿದ್ದರು. ಚಿನ್ನ ಎನ್ನುವ ಹುಡುಗ, ಮತ್ತು ಆಕೆಯ ಮಗಳು ಮನೆಯಲ್ಲಿದ್ದರು. ಮನೆ ಯಜಮಾನ ಕಾಣಲಿಲ್ಲ, ನಾವು ವಿಚಾರಿಸಲಿಲ್ಲ. ಸುಮಾರು ಒಂಬತ್ತರ ಸುಮಾರಿಗೆ ಚಿನ್ನ ಊಟಕ್ಕೆ ಕರೆಯಲು ಬಂದವನು, ಅಲ್ಲಿಯೇ ಮಾತಿಗೆ ಕುಳಿತ, ತಾನು ಬೆಂಗಳೂರಿನಲ್ಲಿರುವುದಾಗಿ, ಹಾಗೂ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿ ಅಲ್ಲಿಯ ವಿವರಗಳನ್ನೆಲ್ಲಾ ಹೇಳಿದ. ನಂತರ ಊಟಕ್ಕೆ ಹೊರೆಟೆವು, ಸಣ್ಣ ಮನೆಯಲ್ಲಿ ಸಾಲಾಗಿ ಕುಳ್ಳರಿಸಿ,  ಬಿಸಿ ಬಿಸಿ ಕೆಂಪಕ್ಕಿ ಅನ್ನ ಮತ್ತು ಸಾಂಬಾರು ಬಡಿಸಿದರು. ನಮಗೆ ಮೊಟ್ಟೆ ಬುರ್ಜಿ ಬಂತು. ರುಚಿಕರವಾದ ಸಾಂಬಾರು ಅನ್ನ, ನಮ್ಮ ಹಸಿವನ್ನು ನೀಗಿಸಿತ್ತು, ನಮಗೆ ಊಟದ ವ್ಯವಸ್ಥೆ ಮಾಡಿದಕ್ಕಾಗಿ ತುಂಬಾನೆ ವಂದನೆಗಳನ್ನರ್ಪಿಸಿದೆವು. ನಮಗೆ ಬೆಳಗ್ಗೆ ತಿಂಡಿಗೆ ಅಕ್ಕಿರೊಟ್ಟಿಯ ವ್ಯವಸ್ಥೆ ಕೂಡ ಆಯಿತು. ಬೆಳಿಗ್ಗೆ ಒಂಬತ್ತಕ್ಕೆಲ್ಲಾ ರೆಡಿ ಮಾಡಿಕೊಡುವೆ ಎಂದರು. ನಮ್ಮ ಉಪವಾಸದ ಚಾರಣದ ಬವಣೆಗಳು ಏನೇನಿರುತ್ತಿದ್ದವೋ, ಎಲ್ಲವೂ ಕೂಡಿಬಂದಿತ್ತು. ಹಿಂದಿರುಗಿ ಬಂದು ಒಂದೇ ಟೆಂಟ್‍ನಲ್ಲಿ ನಾಲ್ವರು ಮಲಗಿದೆವು. ಬೆಳಿಗ್ಗೆ ನಾಲ್ಕಕ್ಕೆ ನಮ್ಮ ಪ್ರಯಾಣ ಪ್ರಾರಂಭವಾಗಿ, ದಿನ ಪೂರ್ತಿಯ ಪಯಣದಿಂದ ದಸೆಯಿಂದ ಎಲ್ಲರೂ ಬೇಗ ನಿದ್ದೆ ಹೋದೆವು.

    ರಾತ್ರಿ ಆಗಾಗ ಮಳೆಯ ಸದ್ದು ಕೇಳುತ್ತಿತ್ತು, ಅಷ್ಟಕ್ಕು ಜೋರು ಮಳೆಯೇನಿರಲಿಲ್ಲ, ನಾನು ಚೆನ್ನಾಗಿ ನಿದ್ದೆ ಮಾಡಿದ್ದೆ. ನಾವು ಕಾಡಿನಲ್ಲಿ ಉಳಿದುಕೊಂಡಾಗಲೆಲ್ಲಾ ಸರಿಯಾಗಿ ನಿದ್ದೆಯಾಗುತ್ತಿರಲಿಲ್ಲ, ಮಳೆ ಅಥವಾ ಗಾಳಿಗೆ ನಿದ್ದೆ ಬರುತ್ತಿರಲಿಲ್ಲ, ಹಾಗು ಟೆಂಟ್ ಎಲ್ಲಿ ಹಾರಿಹೋಗುವುದೋ ಎನ್ನುವ ಭಯ. ದೂರದ ಕಾಡಿನಲ್ಲಿ, ಪ್ರಾಣಿಗಳ ಹಾವು ಕೀಟಗಳ ಭಯವಾಗದೆ ಇಲ್ಲದಿಲ್ಲ. ಬೆಳಿಗ್ಗೆ ಎದ್ದು ಮೂವರು ಹೊಳೆಯ ಕಡೆ ಹೊರಟೆವು, ಜಯರಾಮ ಮತ್ತೊಂದು ಸುತ್ತು ನಿದ್ದೆ ಮಾಡಿದ. ಬೆಳಿಗಿನಿಂದಲೇ ಮೋಡ ಮುಚ್ಚಿಕೊಂಡಿತ್ತು, ತುರ್ತು ಕೆಲಸ ಮುಗಿಸಿ, ಮುಖ ತೊಳೆದು ವಾಪಾಸ್ಸಗುತ್ತಿದ್ದಂತೆ ಮಳೆ ಶುರುವಾಯಿತು, ನಿಲ್ಲಲ್ಲೆಂದು ಹತ್ತಿರದ ಮನೆಯ ಬಳಿ ಓಡಿದೆವು. ಮನೆಯಾತ ಒಳಗೆ ಕರೆದರು, ಪರ್ವಾಗಿಲ್ಲ, ಇಲ್ಲೆ ನಿಲ್ಲುತ್ತೀವಿ ಎಂದರೂ ಕೇಳದೆ, ಒಳಗೆ ಬನ್ನಿ ಕಾಫಿ ಕುಡಿಯುವಿರಂತೆ ಎಂದು ಬೇಡವೆಂದರೂ ಕೇಳದೆ ಕರೆದುಕೊಂಡು ಹೋದರು. ಮಳೆಯ ಬಗ್ಗೆ ಮಾತನಾಡುತ್ತ ಬಿಸಿ ಬಿಸಿ ಹಾಲು ಲೋಟದ ತುಂಬಾ ಕೊಟ್ಟರು. ನಮ್ಮ ಪರಿಚಯ ಮಾಡಿಕೊಂಡು ನಾವು ರಾತ್ರಿ ಉಳಿದುಕೊಂಡು, ಊಟದ ವ್ಯವಸ್ಥೆ ಮತ್ತು ನಮ್ಮ ಶಿಶಿಲ ಗುಡ್ಡ ಮತ್ತು ದೇವರಮನೆ ಪ್ರಯಾಣದ ಬಗ್ಗೆ ಹೇಳಿಕೊಂಡೆವು. ಈಗ ಗುಡ್ಡಕ್ಕೆ ಹೋದರೆ ತುಂಬಾ ಜಿಗಣೇ ಇರುತ್ತೆ ಎನ್ನುತ್ತಾ ಹಲವು ನಿಂಬೆಹಣ್ಣುಗಳನ್ನು ಕೊಟ್ಟು ಅದರ ರಸವನ್ನು ಹಚ್ಚಿದರೆ ಜಿಗಣೆ ಬಿಟ್ಟುಬಿಡುತ್ತವೆ ಎಂದು ಹೇಳುತ್ತಾ ಬೀಳ್ಕೊಂಡರು. ನಮಗೋ ಇಲ್ಲದ ಆನಂದ, ರಾತ್ರಿ ಒಳ್ಳೆಯ ಊಟ, ತಂಗಲು ಶಾಲೆ, ತಿಂಡಿಗೆ ಅಕ್ಕಿರೊಟ್ಟಿ ಇನ್ನೇನು ಪಡೆದುಕೊಂಡಿರಬೇಕು, ಶಿವಪ್ಪ, ನೀನು ಎಲ್ಲೆಲ್ಲಿ ಇದ್ದೀಯಪ್ಪಾ, ಎಂದೆನಿಸಿತು!

     ಶಾಂತಮ್ಮ ಕೆಂಪಕ್ಕಿ ಹಿಟ್ಟಿನ ಹದವಾದ ರೊಟ್ಟಿ ಮತ್ತು ಚಟ್ನಿ ಮಾಡಿದ್ದರು. ನೋಡಲು ದಪ್ಪವಿದ್ದರು ಮೆತ್ತಗೆ, ರುಚಿಯಾಗಿ ಇತ್ತು. ನಾನು ಮೂರು ರೊಟ್ಟಿ ಮನಸಾರೆ ತಿಂದೆ, ಹಿಂದೊಮ್ಮೆ ಇದೇ ಶಿಶಿಲದ ಗುಡ್ಡಕ್ಕೆ ಹೋದಾಗ, ಹೊಳೆಗಂಡಿಯ ಅಣ್ಣೇಗೌಡ್ರು ಮನೆಯಲ್ಲಿ ತಂಗಿದಾಗಲೂ ಇಂತಹುದೇ ರೊಟ್ಟಿಯ ಔತಣವಿತ್ತು. ತಿಂಡಿಯ ನಂತರ ಬಿಸಿ ಚಹಾ ಕೊಟ್ಟರು. ಚಿನ್ನ ನಮ್ಮೊಡನೆ ಬರುವೆ ಎಂದಿದ್ದ, ಕೆಲಸದ ಮೇಲೆ ಕಾರು ಚಲಾಯಿಸಲು ಪೇಟೆಗೆ ಹೋಗಬೇಕಿರುವುದರಿಂದ ಬರಲಾಗಲಿಲ್ಲವೆಂದ. ನಾನು ಒಮ್ಮೆ ಗುಡ್ಡಕ್ಕೆ ಹೋಗಿಬಂದಿರುವುದರಿಂದ ಪರ್ವಾಗಿಲ್ಲ, ಹೋಗುತ್ತೇವೆ ಎಂದು, ಅವರಿಗೆ ಧನ್ಯವಾದಗಳನ್ನು ಅರ್ಪಿಸಿ, ಬೀಳ್ಕೊಂಡು ಬೈರಾಪುರಕ್ಕೆ ಬಂದೆವು.

     ಭೈರವೇಶ್ವರ ದೇವಸ್ಥಾನ ಮಂಜಿನಿಂದ ಮುಚ್ಚಿಕೊಂಡಿತ್ತು... ಹಿಂದುಗಡೆಯಿರುವ ದಾರಿಯ ಹುಡುಕಿ ಬೆಟ್ಟವನ್ನು ಹತ್ತಲು ಆರಂಬಿಸಿದೆವು. ಕೆಸರು ದಾರಿಯ ಹಾದಿಯಲಿ ನಡೆಯುತ್ತ ಏರು ಹೆಚ್ಚಾದಂತೆ ಕಾಡಿನ ಕಡೆ ನಡೆಯಹತ್ತಿದೆವು. ಕಾಡಿನೊಳಗಿಂದ ಮಂಜು ಹೊರಬರುತ್ತಿದೆಯೇನೋ ಎಂಬಂತೆ ಭಾಸ... ದೂರದಲ್ಲಿ ಕೂಗುವ ಹಕ್ಕಿಗಳಿಲ್ಲ, ನೋಡಲು ಏನು ಕಾಣದಂತೆ ದಟ್ಟೈಸಿದ ಶುಭ್ರಬಿಳಿಯ ತೆರೆಗಳೊಳಗೆ ನುಗ್ಗುತ್ತಾ ಎತ್ತ ನಡೆದೆವೋ ಏನೋ, ದಾರಿಯಂತೂ ಇತ್ತು... ಆದರೆ ಇದು ಶಿಖರದ ಕೊನೆಗೆ ಹೋಗದೆ, ಅದು ನೀರು ಹರಿಸಲು ಅಲ್ಲಿಯವರು ಮಾಡಿಕೊಂಡಿದ್ದ ಒಂದು ಹಳ್ಳದ ಕಡೆ ನಿಂತಿತು. ತಿರುಗಿ ಬಂದು ದಾರಿ ಕವಲೊಡೆದ ಕಡೆಯಿಂದ ಬೇರೆ ಕಾಲು ದಾರಿ ಹಿಡಿದೆವು. ಕಾಡಿನ ದಾರಿಯಲ್ಲಿ ಹತ್ತುತ್ತಿದ್ದಂತೆ ಜಿಗಣೆಗಳು ಹತ್ತಲಾರಂಬಿಸಿದವು, ಮಳೆಗಾಲದ ತೇವಕ್ಕೆ ಜೀವ ತುಂಬಿ ಗೇಣಿಡುತ್ತಾ, ಸದ್ದಿಲ್ಲದೇ, ನೋವುಂಟುಮಾಡದೇ ಆಕ್ರಮಿಸುವಂತೆ ಹೆಜ್ಜೆಗಳ ಸುತ್ತಾ ಆಕ್ರಮಿಸುತ್ತಿದ್ದವು. ಕಾಲಿಗೆ, ಶೂಗಳಿಗೆ ಹಚ್ಚಿದ್ದ ನಿಂಬೆ ಹಣ್ಣಿನ ಹುಳಿ ಮಳೆಗೆ ಅದಾಗಲೇ ತಿಳಿಯಾಗಿ ಜಿಗಣೆಗಳಿಗೆ ಅದರ ಲೆಕ್ಕವೇ ಇಲ್ಲದೆ ನಮ್ಮನ್ನಂಟಿಕೊಂಡಿದ್ದವು. ರಕ್ತದಾನದ ಪ್ರಕ್ರಿಯೆ ಆರಂಭವಾಗಿತ್ತು.

     ಗುಡ್ಡದ ಅಂಚಿಗೆ ಬಂದ ದಾರಿಯಲ್ಲೇ ಮುಂದುವರೆದಂತೆ ಯಾವ ಕಡೆ ಹೋಗುವುದೋ ತಿಳಿಯಲಿಲ್ಲ, ಮಳೆಯ ಹನಿಗಳು ಜೋರಾಗಿ ಬೀಳುತ್ತಿದ್ದವು, ಗುಡ್ಡದ ಆಚೆಕಡೆಯಿಂದ ರವ್ವನೆ ಗಾಳಿ ಬೀಸುತ್ತಿತ್ತು ಅದರೊಡನೆ ಮಳೆಯ ಹನಿಗಳನ್ನು ಹೊತ್ತುತರುತ್ತಿತ್ತು. ನಮಗೆ ಮಳೆ ಹುಟ್ಟುವ ಜಾಗದ ಪರಿಚಯವಾಗತೊಡಗಿತು. ಇನ್ನು ಗುಡ್ಡದ ಕೊನೆ ಮುಟ್ಟಿರಲಿಲ್ಲವಾದರು, ಮತ್ತೆ ಕಾಡಿನೊಳಗೆ ನುಸುಳಿ ಹೋಗಬೇಕು, ಕೆಲವೇ ಕೆಲವು ಅಡಿಗಳ ನಂತರ ದಾರಿಯೂ ಕಾಣದೇ, ಎಡಕ್ಕೆ ಕಠಿಣವಾದ ಏರನ್ನು ಏರಿ ಸುತ್ತಾ ನೋಡಿದರು ದಾರಿ ಕಾಣಲೊಲ್ಲದು. ಹಿಂದಿನ ಬಾರಿ ನಾನು ಇಲ್ಲಿ ಒಂಟಿ ಚಾರಣಕ್ಕೆ ಬಂದಾಗ ದಾರಿ ತಪ್ಪಿದ ಕಥೆ ಎಲ್ಲರಿಗೂ ತಿಳಿದಿತ್ತು, ಈ ಮಳೆಯಳಿ ದಾರಿ ಹುಡುಕಲು ಗುಡ್ಡವೇ ಕಾಣುತ್ತಿಲ್ಲ, ಕೊನೆ ತಲುಪಿದರೂ ಸುತ್ತಲಿನ ಅಗಾಧ ಕಣಿವೆಯ ದೃಶ್ಯಗಳೂ ಕಾಣಿಸಲಾರವು, ಇನ್ನೊಮ್ಮೆ ಬರೋಣ ಎಂದು ಬಲವಂತದಿಂದ ವಾಪಸ್ಸು ಹೊರಡಿಸಿದರು. ವಾಪಸ್ಸು ಬರುವಾಗ ಹೀಗೆ-ಹಾಗೆ ಹೋಗಬೇಕಿತ್ತು ಎನ್ನುವ ವಾದಗಳಿಗೇನೂ ಕೊರತೆಯಿರಲಿಲ್ಲ. ಅಪೂರ್ಣ ಚಾರಣವಾದರೂ ಮಂಜು-ಮಳೆಯ ಅನುಭವ ಮುದನೀಡಿತ್ತು. ಇಳಿದು ಬಂದು ಬಯಲು ಸಿಕ್ಕಿದೆಡೆಯಲ್ಲಿ ಕಾಲು - ಶೂಗಳ ತಪಾಸಣೆ, ಜಿಗಣೆಗಳ ಕೀಳುವಿಕೆ, ನಿಂಬೆ ಹುಳಿಯ ಹಿಂಡುವಿಕೆ, ನಡುನಡುವೆಯೇ ಆಗಾಗ ಶಿಶಿಲ ಗುಡ್ಡ ಕಾಣತೊಡಗಿತು, ವೀಡಿಯೋ ಕ್ಯಾಮೆರ ರೋಲ್ ಆಗುತ್ತಿದ್ದರೆ, ಸ್ಟಿಲ್ ಕ್ಯಾಮೆರಾದಲ್ಲಿ ಚಿತ್ರಗಳು ಸ್ಥಬ್ದವಾಗುತ್ತಿತ್ತು. ಆಗ ಜ್ಞಾಪಿಸಿಕೊಂಡ ಮಂಜು ಮತ್ತು ಗೆಳೆಯರು ನನ್ನ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು. ನನ್ನ ೪೩ನೆಯ ಹುಟ್ಟುಹಬ್ಬಕ್ಕೆ ಇದಕ್ಕಿಂತ ಬೇರೆ ವಿಶೇಷತೆ ಬೇಕಾಗಿರಲಿಲ್ಲ. ನಾನು ಮನೆಯವರಿಗೆ ಕರೆಮಾಡುತ್ತಿದ್ದಂತೆ ಶುಭಾಶಯಗಳು ಹರಿದು ಬಂದವು.

       ದೇವಸ್ಥಾನದ ಬಳಿ ನಮ್ಮ ಕಾರ್ ನಿಂತಿತ್ತು. ಹತ್ತಿರದ ಕಲ್ಯಾಣಿಯಲ್ಲಿ ಮುಖತೊಳೆದು ನೀರು ಕುಡಿದು ಮತ್ತೆ ನಮ್ಮ ಪ್ರಯಾಣ ದೇವರಮನೆ ಕಾಲಭೈರವನ ದೇವಸ್ಥಾನದ ಕಡೆ ಮುಂದುವರಿಯಿತು. ನಮ್ಮ ಪ್ರಯಾಣದಲ್ಲಿ ದೇವಸ್ಥಾನಗಳನ್ನು ಸಂದರ್ಶಿಸಬೇಕೆಂದು ಅಂದುಕೊಂಡಿರಲಿಲ್ಲವಾದರೂ ದಾರಿಯುದ್ದಕ್ಕೂ ಸಿಗುವ ದೇಗುಲಗಳ ಬಳಿ ನಿಲ್ಲಿಸದೇ ಇರಲಿಲ್ಲ. ದೇವರಮನೆ ಗುಡ್ಡದ ತರಹ ಇಲ್ಲವಾದರೂ ಮೇಲೆ ಹಳೆಯ ಕಾಲದ ಒಂದು ಶಿವಾಲಯವಿದೆ. ಕೇವಲ ಒಂದೆರೆಡು ಮನೆಗಳು ಅಲ್ಲಿದ್ದು ತೋಟಗಳನ್ನು ಮಾಡಿಕೊಂಡಿದ್ದಾರೆ, ಬಣಕಲ್ ಮಾರ್ಗವಾಗಿ ಇಲ್ಲಿಗೆ ಚಾರಣದ ಹಾದಿಯು ಉಂಟಂತೆ. ಹೊಸಕೆರೆಯ ದಾರಿಯಲ್ಲಿ ಹಿಂದುರುಗಿ ಬರುವಾಗ ದೇವರಮನೆ ಕಡೆ ಡಾಂಬರು ರಸ್ತೆಯಿದೆ. ಏರಿನ ದಾರಿಯಲ್ಲಿ ಬರುವಾಗ ಇಕ್ಕೆಲಗಳಲ್ಲೂ ಕಣಿವೆಗಳ ಮನಮೋಹಕ ದೃಶ್ಯಗಳು ಮಂಜಿನಲ್ಲಿ ಇಣುಕುತ್ತಿದ್ದವು. ಹಾವು ಹರಿದಂತೆ ಹರಿವ ಕರಿಯ ಡಾಂಬರು ರಸ್ತೆಗಳು, ತಂಪಾದ ಹವೆ, ಮುತ್ತಿಕ್ಕುವ ಮಂಜು ಇವು ಸಾಲದೆ ಆಗಾಗ ಕಾರು ಇಳಿದು ಕೈಚಾಚಿ ಖುಶಿಯಾಗಿ ಚೀರಲು. ಬೇರೆ ಯಾವ ವಾಹನಗಳು, ಮನುಷ್ಯರ ಸುಳಿವು ಇಲ್ಲದ ಈ ಸುಂದರ ರಸ್ತೆಯಲ್ಲಿ ನಾವು ಕುಳಿತೇಬಿಟ್ಟೆವು. ಸಮಯದ ಅಭಾವವೇನೂ ಇರಲಿಲ್ಲ, ಸಾಕಷ್ಟು ಸಮಯ, ಫೋಟೋಗಳಾದವು.

     ಒಂದೆರೆಡು ಕಿಲೊಮೀಟರ್ ಮಣ್ಣಿನ ರಸ್ತೆಯಲ್ಲಿ ಕ್ರಮಿಸಿದ ಮೇಲೆ ದೇವರಮನೆ ದೇವಸ್ಥಾನ ಕಾಣಿಸಿತು. ಗುಡಿಯ ಎದುರಿಗೆ ನೀರಿನ ಸದ್ದು ಕೇಳಿಸುತ್ತಿದ್ದು ಜಲಪಾತವಿರಬಹುದು ಎಂದುಕೊಂಡೆವು, ಆದರೆ ಅಲ್ಲಿ ಸುಂದರ ಕೊಳವೊಂದಿತ್ತು, ಮಳೆಯ ನೀರು ಸ್ವಲ್ಪ ಎತ್ತರದಿಂದ ಇಲ್ಲಿ ಶೇಖರಣೆಯಾಗುತ್ತಿತ್ತು. ಸುತ್ತಲಿನ ನೀರವ ಮೌನದಲ್ಲಿ, ಮಂಜು ಮುಸುಕಿನಲ್ಲಿ ಜಲಪಾತದ ಸದ್ದಾಗಿ ಕೇಳಿಸಿತ್ತು. ಕಾಲಭೈರವನ ದರ್ಶನಕೆ ಸುತ್ತಲಿನ ಹಳ್ಳಿಯವರು ಬಂದು ಹೋಗುವರು ಎಂದು ದೃಡೀಕರಿಸಲು ಯಾ‍ರ‍್ಯಾರದೋ ಹೆಸರುಗಳ ಸೇವೆಗಳ ವಿವರಗಳು ಅಲ್ಲಿದ್ದವು, ಪುರಾತನ ಗುಡಿಯ ಬಗಲಿಗೆ ಶಿವನ ಬಣ್ಣದ ವಿಗ್ರಹದ ಗುಡಿಯೊಂದಿತ್ತು. ಎಲ್ಲಾ ನೋಡಿಕೊಂಡು ನಾವು ಅಲ್ಲಿಂದ ವಾಪಸ್ಸು ಅದೇ ದಾರಿಯಲ್ಲಿ ಹಿಂದುರುಗಿ ಚಹಾ ಕುಡಿದು, ಸಂಜೆಯ ಸಮಯಕ್ಕೆ ಧರ್ಮಸ್ಥಳದ ಸೇರಿದೆವು.

     ಬೆಳಿಗ್ಗೆ, ಧರ್ಮಸ್ಥಳದ ಮಂಜುನಾಥನ ದರ್ಶನವಾಯಿತು. ಗೌಡ್ರ ಮಂಡೆಕೊಡುವ ಕಾರ್ಯಕ್ರಮವೂ, ಗೆಳೆಯ ಮಂಜುಲಿಂಗೇಶನ ಒಂದು ರಾತ್ರಿ ದೇವಸ್ಥಾನದಲ್ಲಿ ಕಳೆಯುವ ಕಾರ್ಯಕ್ರಮವು ಮುಗಿದವು, ಇನ್ನು ಅಲ್ಲಿಂದ ಶಿಶಿಲ ಊರು ತಲುಪುವ ನನ್ನ ಕಾರ್ಯಕ್ರಮವೊಂದಿತ್ತು. ಧರ್ಮಸ್ಥಳದಿಂದ - ಕೊಕ್ಕಡ ಮಾರ್ಗವಾಗಿ ಬಂದು ೧೬ ಕಿ.ಮಿ. ದೂರದಲ್ಲಿ ಶಿಶಿಲ ಎನ್ನುವ ಊರಿದೆ. ಇಲ್ಲಿ ಕಪಿಲ ನದಿಯ ತಟದಲ್ಲಿ  ಶಿಶಿಲೇಶ್ವರನ ಗುಡಿಯಿದೆ. ಶಿವನ ದರ್ಶನ ಪಡೆದು, ರುದ್ರಾಭಿಷೇಕ ಪೂಜೆ ಮುಗಿಯುವ ಮುಂಚೆಯೇ, ಅಲ್ಲಿಂದ ೭ ಕಿ.ಮೀ. ದೂರದ ಹೊಳೆಗಂಡಿಯ ಅಣ್ಣೆಗೌಡ್ರು ಮನೆಗೆ ನಾನು ಹೋಗಬೇಕಿತ್ತು. ಮೋಡ ಮುಚ್ಚಿಕೊಂಡಿದ್ದು ಮಧ್ಯಾನ್ಹ ಸಮಯವಾಗುತ್ತಿತ್ತು, ಇನ್ನು ಬೆಂಗಳೂರು ತಲುಪಲು ಸಮಯವಾಗುವುದೆಂದು ಬೇಗನೆ ಹೊರಟೆವು. ಹೊಳೆಗಂಡಿಯ ದಾರಿಯಲ್ಲಿ ಮತ್ತೊಮ್ಮೆ ನಮಗೆ "ಮಳೆ ಹುಟ್ಟುವುದೇ ಅಲ್ಲಿ", ಅನುಭವವಾಯಿತು. ಹೊಳೆಗಂಡಿಯ ದಾರಿಯಲ್ಲಿ ಸಾಗುತ್ತಿದ್ದಂತೆ ಶಿರಾಡಿ ಕಾಡಿನ ಕಡೆ ಮಳೆಯ ರಭಸ ಹೆಚ್ಚಾಯಿತು, ಮಲೆನಾಡಿನ ಮಳೆಯ ಅನುಭವವಾಯಿತು. ಕಾರಿಳಿದು, ತೋಟದ ಮನೆಯ ಬೇಲಿಯ ಮರಗಳನ್ನು ಸರಿಸಿ, ದಾಟಿ ಪಡಸಾಲೆಗೆ ಬರುವಷ್ಟರಲ್ಲಿ ಸಂಪೂರ್ಣ ತೋಯ್ದಿದ್ದೆವು. ಅಣ್ಣೆಗೌಡ್ರು ಮನೆಯಲ್ಲಿರಲಿಲ್ಲ, ಅಡಿಕೆ ತೋಟದಿಂದ ಮನೆಯಾಕೆ ಬಂದು ಮಾತನಾಡಿಸಿದರು. ಗೌಡ್ರ ನೆನಪಿಗೆ ಒಂದು ಬಾಟ್ಲಿ ಕೊಟ್ಟು, ಮತ್ತೊಮ್ಮೆ ಮಳೆ ನಿಂತಮೇಲೆ ಬರುವುದಾಗಿ ಹೇಳಿ ಅಲ್ಲಿಂದ ಬೆಂಗಳೂರಿನ ಹಾದಿ ಹಿಡಿದೆವು.


      ಅಲ್ಲಿ ಪ್ರಾರಂಬವಾದ ಮಳೆ ಹಾಸನದವರೆಗೂ ಮುಂದುವರೆದಿತ್ತು. ಗುಂಡ್ಯ ತಲುಪಿದಾಗಲಂತೂ ಧಾರಾಕಾರ ಮಳೆ. ಮಳೆಯಾಳಿ ಹೋಟೆಲೊಂದರಲ್ಲಿ ಕುಳಿತು ಪರೋಟ, ಕುಸುಬಲಕ್ಕಿ ಅನ್ನ ತಿನ್ನುವಾಗ, ಆ ಕಪ್ಪುಗಟ್ಟಿದ ಮೇಜು, ಕುರ್ಚಿಗಳ ಮೇಲಿನ ತೇವ, ಮಾಳಿಗೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆ ನೀರು, ನಗುತ್ತಾ ಕನ್ನಡದಲ್ಲೇ ಮಾತನಾಡಿ ಹಣ ಪಡೆದ ಮಳೆಯಾಳಿ ಹೆಂಗಸು, ಎಲ್ಲಾ ಗಮನಿಸುತ್ತಿದ್ದಾಗ ಯಾವುದೋ ಕಾದಂಬರಿ ಓದಿದ ನೆನಪು! ಕೆಂಪುಹೊಳೆಗೆ ಹರಿದು ಹೋಗುತ್ತಿದ್ದ ನೀರಿನ ಆರ್ಭಟ, ಅದನ್ನು ನೋಡಲು ನಿಲ್ಲಿಸಿದ ಕಾರುಗಳು, ಮಳೆಯನ್ನು ಲೆಕ್ಕಿಸದ ಅಬಾಲವೃದ್ದರು ಫೋಟೊಗಳಿಗಾಗಿ ಪಡುತ್ತಿದ್ದ ಅವಸರ, ಅಬ್ಬಬ್ಬಾ ಕೆಂಪುಹೊಳೆಯ ಗುಡ್ಡಗಳಲ್ಲಿ ಕಂಡ ನಾಲ್ಕಾರು ಜಲಪಾತಗಳು, ಎಲ್ಲವನ್ನು ಲೆಕ್ಕಿಸಿ ತೋರಿಸಿದ ೧೧೬ ಕಿರು-ತೊರೆಗಳು, ಏದುಸಿರು ಬಿಡುತ್ತಾ ಬರೀ ಎರಡು ಮತ್ತು ಮೂರನೇ ಗೇರಿನಲ್ಲಿ ಮಾತ್ರ ಓಡುತ್ತಿದ್ದ ಕಾರು, ಘಟ್ಟಗಳಲ್ಲಿ ತಿರುತಿರುಗಿ ತಿರುಗಿಸಿದ ಕಾರು ನನ್ನ ಬಹುದಿನದ ಮಲೆನಾಡಿನ ಮಳೆಯ ನೋಡುವ ಆಸೆಯನ್ನು ಪೂರೈಸಿದ್ದವು. ಜೊತೆಗೆ ಭೈರವೇಶವ್ವರ, ಬೆಟ್ಟದ ಭೈರವ, ಶಿರಾಡಿಯ ಅಮೃತೇಶ್ವರ, ಧರ್ಮಸ್ಥಳ ಮಂಜುನಾಥೇಶ್ವರ ಮತ್ತು ಶಿಶಿಲೇಶ್ವರ ಹೀಗೆ ಪಂಚ ಶಿವಕ್ಷೇತ್ರ ಮತ್ತು ಸೌತಡ್ಕ ಗಣೇಶನ ದರ್ಶನ ಭಾಗ್ಯವು ನಮ್ಮದಾಗಿತ್ತು!


Comments

Popular posts from this blog

Gelati!