My solo trek at Ettina Bhuja

Ettina Bhuja view from Bairapura village.

          ಹೀಗೊಂದು ದಿನ, ನಾನು ನನ್ನ ಮೂರನೆಯ ಒಂಟಿ ಚಾರಣಕ್ಕೆ ಅಣಿಯಾದೆ. ನಾನು ಹೋಗಬೇಕೆಂದು ಅಂದುಕೊಂಡದ್ದು ಧರ್ಮಸ್ಥಳ, ಬೆಳ್ತಂಗಡಿ ಬಳಿಯ ಶಿಶಿಲ ಎನ್ನುವ ಗ್ರಾಮದಿಂದ ಎತ್ತಿನಭುಜದಂತೆಯ ಕಾಣುವ ಒಂದು ಗುಡ್ಡಕ್ಕೆ. ಅಲ್ಪಸ್ವಲ್ಪ ಜಾಲಾಡಿ ಇಂಟರ್ನೆಟ್ ನಲ್ಲಿ ತಿಳಿದುಕೊಂಡಿದ್ದೆ ನಾದರು ಪೂರ್ಣತಿಳಿದಿರಲಿಲ್ಲ, ಇದು ಒಂಥರಾ ಥ್ರಿಲ್ಲಿಂಗ್ ಆಗಿತ್ತು. ನಿಜವಾದ್ ಥ್ರಿಲ್ಲಿಂಗ್ ಎಂದರೆ ನಾನು ಆ ಗುಡ್ಡ ಹತ್ತಿ ಬಂದ ನಂತರ ಅದೇ ಇಂಟರ್ನೆಟ್ ನಲ್ಲಿ  ಮನುಷ್ಯನಿಗೆ ಒಂದು ಪಾಯಿಂಟ್ ಆಫ಼್ ರೆಫ಼ೆರೆನ್ಸ್ ಅಥವಾ ತಾನು ಹೋಗಬೇಕಾದ ಸ್ಥಳದ ಬಗ್ಗೆ ಸ್ಪಷ್ಟ ಗುರುತು ಇಲ್ಲದಿದ್ದಲ್ಲಿ, ನೇರವಾಗಿ ನಡೆಯಲು ಹೇಳಿದರೆ, ತಾನು ನೇರ ಹೋಗುತ್ತಿದ್ದೇನೆ ಎಂದುಕೊಂಡೇ ವರ್ತುಲಾಕಾರದಲ್ಲಿ ಸುತ್ತು ಹೊಡೆಯುತ್ತಿರುತ್ತಾನೆ. ಅದಕ್ಕೆ ಮಾನವನ ಒಂದು ಕಾಲು ಇನ್ನೊಂದಕ್ಕಿಂತ ಚಿಕ್ಕದಿರುತ್ತದೆ, ಅದರಿಂದ ತನಗರಿವಿಲ್ಲದೆಯೇ ತಾನು ನೇರ ನಡೆಯುತ್ತಿದ್ದೇನೆ ಎಂದುಕೊಳ್ಳುತ್ತಲೇ ಗಿರಕಿ ಹೊಡೆಯುತ್ತಾನೆ, ಎನ್ನುವ ಒಂದು ವಾದವಿದ್ದರೆ, ಭೂಮಿಯ ಗುರುತ್ವಾಕರ್ಷಣೆಯಂತ ತೀವ್ರ ವೈಜ್ಞಾನಿಕ ಸಬೂಬು ಮತ್ತು ಅಂಥಹುದೇ ಹಲವಾರು ಕಾರಣಗಳು ಮತ್ತು ಚರ್ಚೆಗಳಿಗಿದ್ದವು. ಇದನ್ನು ಓದಿ ನಾನು ಆಶ್ಚರ್ಯ ಪಟ್ಟರೂ, ನನ್ನದೇ ಅನುಭವ ಅದೂ ಕೇವಲ ಎರಡು ದಿನಗಳ ಹಿಂದೆ ಆದ ಭಯಂಕರ ಅನುಭವ ಮಾತ್ರ ರೋಮಾಂಚನೀಯ ಹೌದು, ರೋಮಾಂಚನೀಯ ಏಕೆಂದರೆ ನಾನು ಮತ್ತೆ ದಾರಿ ಹಿಡಿದು ಮನೆಗೆ ಬಂದಿದ್ದು.
Me and Mr. AnneGowdru, Holegandi Mane.
      ಶಿಶಿಲ ಗ್ರಾಮದ ಹತ್ತಿರವಿರುವ ಹೊಳೆಗಂಡಿ ಎನ್ನುವಲ್ಲಿ ಒಂದು ಮನೆ, ಮನೆಯ ಯಜಮಾನ ಅಣ್ಣೇಗೌಡ್ರು, ಅವರನ್ನು ಭೇಟಿ ಮಾಡಿ ಎತ್ತಿನಭುಜಕ್ಕೆ ದಾರಿ ಕೇಳಿದೆ. ನನ್ನನ್ನು ಹೊಳೆ ದಾಟಿಸಿ, ದಾರಿ ತೋರಿಸಲು ಒಬ್ಬ ಹುಡುಗ ಬಂದ, ಎರಡನೆಯ ಹೊಳೆ ದಾಟಿ ಎಡಕ್ಕೆ ಹೋಗಬೇಕು ಎಂದು ಹೇಳಿದ್ದರು, ಹಾಗೆಯೆ ಸಿಕ್ಕಿದ ಒಂದು ಕಾಲುದಾರಿಯಲ್ಲಿ ಶಿರಾಡಿ ಘಾಟ್‌ನ ದಟ್ಟ ಅರಣ್ಯದಲ್ಲಿ ನಾನು ಒಂಟಿಯಾಗಿ ನಡೆಯುತ್ತಿದ್ದೆ. ಹಕ್ಕಿಗಳ ಕಲರವಗಳಿರಲಿಲ್ಲ. ಮಂಜು ಮುಸುಕಿರಲಿಲ್ಲ, ಬೆಳಕಿರಲಿಲ್ಲ, ದಟ್ಟವಾಗಿ ಬೆಳೆದ ಮರಗಳ ಬಳ್ಳಿಗಳ ಏರು ದಾರಿಯಲ್ಲಿ ಸುಮಾರು ಒಂದೂ ಒಂದೂವರೆ ಗಂಟೆ ನಡೆದಿರಬಹುದು. ಅಂದು ಏಕೋ ಏನೋ ನನ್ನ ಗಡಿಯಾರ ಕೂಡ ನಡೆಯುತ್ತಿರಲಿಲ್ಲ, ನೆಟ್‌ವರ್ಕ್ ಇಲ್ಲದ ಕಾರಣ ಮೊಬೈಲ್ ಬ್ಯಾಗಿನೊಳಗಿತ್ತು, ಏಕತಾನತೆಯ ಅಸಂಖ್ಯ ಮರಗಳ ಮಧ್ಯೆ ಅಂತಾ ದೃಶ್ಯಾವಳಿಗಳು ಇಲ್ಲದಿದ್ದಾಗ ಕ್ಯಾಮೆರ ಕೂಡ ಸುಮ್ಮನಾಗಿತ್ತು. ಅಂದಾಜು 8ಕ್ಕೆ ಹೊರಟು 9.30 - 10.00 ಆಗಿರಬಹುದು, ದೂರದಲ್ಲಿ ಯಾರೋ ಮರ ಕಡಿಯುವ ಸದ್ದು ಕೇಳಿ ನೋಡಲು ಕೂಡಲೆ ಎಲ್ಲಿದ್ದಾರೋ ತಿಳಿಯಲಿಲ್ಲ, ಒಂದು ವೇಳೆ ಗಂಧದ ಮರ ಕಳ್ಳರಿರಬಹುದು ಅಥವ ಬಿದಿರು ಕಡಿಯಲು ಇಷ್ಟು ದೂರಬಂದಿರಬಹುದೆಂದುಕೊಂಡು ಮಾತನಾಡಿಸಲು ಇಷ್ಟಪಡಲಿಲ್ಲ. ಆದರೆ ಮುಂದಿನ ತಿರುವಿನ ನಂತರ ದಾರಿಯೂ ಕಾಣದಂತೆ ಚಿಕ್ಕ ಚಿಕ್ಕ ಗಿಡಗಳು ತುಂಬಾ ದಟ್ಟವಾಗಿ ಬೆಳೆದು ರೀಸೆಂಟ್ ಆಗಿ ಕಡಿದ ಗುರ್ತುಗಳಿದ್ದವು. ಯಾಕೊ ಅನುಮಾನ ಬಂದು ಹಿಂದುರುಗಿ ಬಂದು ಶಬ್ದ ಬರುತ್ತಿದ್ದ ದಿಕ್ಕಿಗೆ ತಿರುಗಿ ಕೂಗು ಹಾಕಿ, ದಾರಿ ಕೇಳಿದೆ. ಒಬ್ಬಾತ ಇದು ದಾರಿಯಲ್ಲ, ಗುಡ್ಡಕ್ಕೆ ಎಡಗಡೆಯಿಂದ ಹತ್ತಿ ಹೋಗಬೇಕೆಂದು ಕೂಗಿದ. ಆಘಾತವಾಗಿ ದಾರಿ ತೋರಿಸಬೇಕೆಂದು ಕೂಗಿದಾಗ ಕಾಡಿನೊಳಗಿಂದ  ತೂರಿಬಂದ ದಾರಿಯಂತು ನಾನು ಗುರುತಿಸುವ ಹಾಗಿರಲಿಲ್ಲ. ಸುಮಾರು ದೂರ ಕ್ರಮಿಸಿದ್ದೆ. ಈ ದಾರಿ ಅಲ್ಲಿಗೆ ಹೋಗುವುದೇ ಇಲ್ಲ, ಇದು ಶಿರಾಡಿ ಘಾಟ್ ಕಡೆ ಹೋಗುತ್ತೆ, ಮತ್ತೆ ಈ ದಾರಿಯಲ್ಲಿ ನೀವು ಖಂಡಿತ ದಾರಿ ತಪ್ಪುತ್ತಿರ, ನೀವು ಹಿಂದುರುಗಿ ಹೊಗಿ, ಹೊಳೆ ದಾಟಿ ಎಡದ ಕಡೆಯಿಂದ ಗುಡ್ಡ ಹತ್ತಬೇಕೆಂದು ಹೇಳಿದ. ಬೇಸರ ಒಂದುಕಡೆ, ಸರಿಯಾದ ದಾರಿಯ ಸುಳಿವು ಸಿಕ್ಕ ಖುಶಿ ಒಂದು ಕಡೆ, ಮಾಡುವ ಬೇರೆ ದಾರಿ ಇಲ್ಲದೆ ಇಳಿದು ಬಂದೆ, ನನ್ನ ಅದೃಷ್ಟವನ್ನು ಹಳಿದುಕೊಳ್ಳುತ್ತ. ನಾನು ಇಲ್ಲಿ ಹಾಗೆಯೇ ಮುಂದುವರೆದಿದ್ದರೆ ನನ್ನ ಪಾಡು ಏನಾಗುತ್ತಿತ್ತೊ!
My first encounter with Kapila River
              ಹೊಳೆಯ ಬಳಿ ಇಳಿದು ಬಂದಾಗ ಮತ್ತೆ ಎರಡು ದಾರಿಗಳಿದ್ದವು, ಈ ಬಾರಿ ಎಡಗಡೆಯ ದಾರಿ ತುಳಿದೆ, ಆತ ಹೇಳಿದ ಮಾತನ್ನು ಶಿರಸಾವಹಿಸಿ. ಜೆಸಿಬಿಯಲ್ಲಿ ಕೊರೆದ ದಾರಿ ಇದೆ, ಹಾಗೆ ಮುಂದೆ ಹೋದರೆ ಆಕಡೆಯಿಂದ ಒಂದು ದಾರಿಬರುತ್ತೆ, ಅಲ್ಲಿ ಮತ್ತೆ ಎಡಕ್ಕೆ ತಿರುಗಿ ಎಂದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ನಡೆದೆ. ಅಗಲವಾಗಿ ಕಾಡು ಕಡಿದು ದಾರಿ ಮಾಡಿದ್ದ ಏರು ದಾರಿಯಾಗಿದ್ದರೂ ದಾರಿ ಸಿಕ್ಕ ಖುಷಿಯಲ್ಲಿ ಬೇಗ ಬೇಗ ನಡೆದೆ, ಬೆಳಿಗ್ಗೆ ಈ ದಾರಿ ಸಿಕ್ಕಿದ್ದರೆ ಇಷ್ಟು ಹೊತ್ತಿಗೆ ತುಂಬಾ ದಾರಿ ಸವೆಸಬಹುದಿತ್ತು ಎಂದು ಕೊಳ್ಳುತ್ತಾ. ದಾರಿಯ ಬಲದ ಇಳಿಜಾರಿನಲ್ಲಿ ನೀರ ಝರಿಯೊಂದು ಸಣ್ಣ ಸಣ್ಣ ಬಂಡೆಕಲ್ಲುಗಳ ನಡಿವಿನಿಂದ ಹಲವಾರು ಚಿಕ್ಕ ಫ಼ಾಲ್ಸ್ಽಽಗಳನ್ನು ನಿರ್ಮಿಸಿತ್ತು, ಫೋಟೊ ನೆನಪಾದರೂ ಒಳ್ಳೆಯ ದೃಷ್ಯ ಸಿಗದೆ ಮುಂದುವರೆದೆ. ಹಾಗೆಯೆ ಬರುತ್ತ ನೀರಿನ ಹರಿವಿನ ಶಬ್ದ ಜೋರಾಗಿ ಒಂದು ಜಲಪಾತದ ಬಳಿ ದಾರಿ ಕೊನೆಗೊಂಡಿತ್ತು.
ಜಲಪಾತವೇನೋ ಸುಂದರವಾಗಿತ್ತು, ಆದರೆ, ಯಾವ ಕಡೆ ನೋಡಿದರು ಅಲ್ಲಿಂದ ಮುಂದುವರೆಯಲು ದಾರಿ ಕಾಣಲಿಲ್ಲ. ಎಲ್ಲಾ ಕಡೆ ನೋಡಿದೆ ಹತ್ತಲು ಯಾವುದಾದರು ದಾರಿ ಇರಬಹುದೇನೋ ಅಂತಾ. ಇಲ್ಲ ಖಂಡಿತಾ ದಾರಿ ಇದಲ್ಲ. ತುಂಬಾ ಬೇಸರವಾಗಿ ಈ ಟ್ರೆಕ್ಕಿಂಗ್‌ನ ಆಸೆಯೇ ಹೋಯಿತು. ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ, ತಿಂಡಿ ತಿಂದು ವಾಪಸ್ಸು ಹೋಗಲು ನಿರ್ಧರಿಸಿ ಬ್ಯಾಗ್ ಇಳಿಸಿ, ಮುಖ ತೊಳೆದೆ. ಹತ್ತಿರದಲ್ಲೆ ಬಂಡೆಯ ಬಳಿ ಕಾಳಿಂಗ ಸರ್ಪವೊಂದರ ಪೊರೆ ನೋಡಿದೆ, ಬೆಳಿಗ್ಗೆಯಿಂದ ಅಲೆದ ಕಾಡಿನ ಅಗಾಧತೆ ಅರಿವಾಗಿತ್ತು. ಸುಮಾರು ಸಮಯ ಅಲ್ಲಿ ಕಳೆದೆ ವಾಪಸ್ಸು ಹೋಗುವ ನಿರ್ಧಾರ ಮಾಡಿದ್ದರಿಂದ. ಹಲವು ಫೊಟೊ ತೆಗೆದುಕೊಂಡು ವಾಪಸ್ಸು ಅಣ್ಣೆಗೌಡ್ರು ಮನೆಯ ಕಡೆ ಇಳಿಯ ತೊಡಗಿದೆ.
the stream running on my right side
The falls, dead end for me!
      ಹೊಳೆ ದಾಟಿ ಬೆಳಿಗ್ಗೆ ಎಡದ ಕಡೆ ಹೋದ ದಾರಿಯ ಬಳಿ ಬಂದು ನನ್ನ ೧೫-೧೬ ವರ್ಷಗಳ ಚಾರಣದ ಅನುಭವದಲ್ಲಿ ಸರಿಯಾಗಿ ಕೇಳಿತಿಳಿಯದೆ ಈ ರೀತಿ ಅಗಿದ್ದಕ್ಕೆ ಬೈದುಕೊಂಡು, ಇನ್ನೊಂದು ಕಾಲು ದಾರಿಯಲ್ಲಿ ನಡೆದೆ. ಸುಮಾರು ದೂರ ಕಾಲು ದಾರಿ ಕ್ರಮಿಸಿ ಹತ್ತಿರ ಬರುತ್ತಿದ್ದಂತೆ ಈ ದಾರಿಯಲ್ಲೇ ಇಳಿದು ಬಂದ ಗುರ್ತು ಹತ್ತಿತು ಹಾಗೂ ಮತ್ತದೆ ಹೊಳೆ. ಒಳ್ಳೆ ಕಥೆಯಾಯ್ತಲ್ಲ. ಎಂದೋ ನೋಡಿದ ಹಾಲಿವುಡ್ ಹಾರರ್ ಸಿನಿಮಾ ಜ್ಞಾಪಕಕ್ಕೆ ಬಂತು. ಮತ್ತೆ ಮತ್ತೆ ಅದೇ ದಾರಿಯಲ್ಲಿ ಬಂದು ನಿಲ್ಲುವ ಆ ದೃಷ್ಯ ಪದೆ ಪದೆ ನೆನಪಾಯಿತು. ಅಮೇಜಿಂಗ್ ಅನುಭವ ಎಂದುಕೊಂಡು ಬೆಳಿಗ್ಗೆ ಬರುವ್ವಗ ಹೊಳೆ ದಾಟಿ ಬಂದ ದಾರಿಯ ನೆನಪಿಸಿಕೊಂಡು ಹೊಳೆಯ ದಾಟಿ ಎಡಕ್ಕೆ ಕಾಲುದಾರಿ ಹಿಡಿದು ಹೋದೆ, ತಿರುಗಿ ಅಲ್ಲಿಗೇ ಬಂದೆ, ಮತ್ತೆ ಬೇರೆ ದಾರಿ ಹಿಡಿದು ನಡೆಯುತ್ತಾ ದಾರಿಗುಂಟಾ ಬಿದ್ದಿದ್ದ ಮರ ಗಿಡ, ಸಗಣಿ ಇವುಗಳನ್ನು ನೆನಪಿಡುತ್ತಾ ಬಂದೆ. ಆ ದಾರಿ ಸುತ್ತಿ ಬಳಿಸಿ ಮತ್ತೆ ಹೊಳೆಯ ಬಳಿ ಬಂತು. ಅಮೇಜಿಂಗ್ ಮತ್ತೆ ದಾರಿ ತಪ್ಪಿದೆ, ನಾನು ಕಾಲು ದಾರಿಯಲ್ಲಿ ಬರುವಾಗ ಎಲ್ಲೂ ಕವಲಿರಲಿಲ್ಲ, ದಿಕ್ಕಿನ ಸುಳಿವು ಸಿಗಲು ಆಕಾಶವೂ ಕಾಣದಿರದಷ್ಟು ದೊಡ್ಡ ಮರ ಗಿಡಗಳು ಎಲ್ಲವು ಒಂದೆ ರೀತಿ ಇರುವಂತೆ ಭಾಸವಾಗಿ ಒಂದು ರೀತಿಯ ಡಿಸ್‌ಓರಿಯಂಟೇಶನ್‌ಗೆ ಗುರಿಯಾಗುತ್ತಿದ್ದೇನೆ ಎಂದೆನಿಸಿತು. ಈ ಸಮಯದಲ್ಲಿ ಸಹಾಯಕ್ಕೆ ಅಲ್ಲಿ ಯಾವ ಮನುಷ್ಯನ ಸುಳಿವೇ ಇಲ್ಲ, ಹಾಗಾಗಿ ಕೂಗುವುದನ್ನೇ ಮರೆತು ಬಿಟ್ಟಿದ್ದೆ. ಮಧ್ಯಾನ್ಹದ ಸಮಯ ಸೆಖೆ ಬೆವರುತ್ತಿದ್ದೆ, ಟೆನ್ಷನ್‌ನಿಂದ ದೇಹ, ತಲೆ ಬಿಸಿಯಾಗುತ್ತಿತ್ತು. ಮುಖ ತೊಳೆದುಕೊಳ್ಳಲು ನೀರಿನ ಬಳಿ ಬಂದು ಬಗ್ಗಿದೆ ಆ ಸಮಯದಲ್ಲಿ ಏನಾಯಿತೋ ನಿಲ್ಲಲ್ಲು ಜಾಗವಿದ್ದರೂ ತಟ್ಟಾಡುತ್ತ ನೀರಿಗೆ ಬಿದ್ದೆ. ಬ್ಯಾಗ್, ಕ್ಯಾಮೆರಾ, ಮೊಬೈಲ್ ಒದ್ದೆಯಾಯಿತು. ಸಾವರಿಸಿಕೊಂಡು ದಡಕ್ಕೆ ಬಂದು ಕುಸಿದು ಕುಳಿತೆ.

ಸದ್ಯ ಎಲ್ಲೂ ಪೆಟ್ಟಾಗಲಿಲ್ಲ. ಬ್ಯಾಗ್‌ನಲ್ಲಿದ್ದ ನೀರಿನ ಬಾಟ್ಲಿಯಿಂದ ನೀರು ಕುಡಿದು ಸುತ್ತಲಿನ ಜಾಗದ ವಿಮರ್ಶೆ ಮಾಡತೊಡಗಿದೆ. ಹಾಗು ಡಿಸ್ಕವರಿ ಚಾನೆಲ್‌ನ ಸರ್ವೈವಲ್ ಟ್ಯಾಕ್ಟಿಕ್ಸ್ ಪ್ರೋಗ್ರಾಮ್ ಜ್ಞಾಪಿಸಿಕೊಂಡೆ, ಪದೆ ಪದೆ ಬೆಳಿಗ್ಗೆ ಬಂದ ದಾರಿ ಜ್ಞಾಪಿಸಿಕೊಂಡು ಬೇರೆ ದಾರಿಯ ಹುಡುಕತೊಡಗಿದೆ. ಹೊಳೆ ದಾಟಬೇಕೆನೋ ನೋಡಿದೆ, ಧೈರ್ಯ ತಂದುಕೊಂಡು ನಡೆಯುತ್ತಾ ಕನಿಷ್ಟ ಎರಡು ದಿನ ತಿಂಡಿಗೆ ಭಯವಿಲ್ಲ, ಕುಡಿಯಲು ನೀರಿದೆ. ರಾತ್ರಿ ಕಳೆಯಲು ಟೆಂಟ್ ಇದೆ, ಟಾರ್ಚ್ ಇದೆ, ಆದರೆ ಬೆಂಕಿ ಪೊಟ್ಟಣ ಇಲ್ಲ ಎಂದೆಲ್ಲಾ ಯೋಚಿಸಿ ಭಯಪಡಬೇಕಾದ ಪ್ರಮೇಯವಿಲ್ಲ ಎಂದು ನಾನೇ ಹೇಳಿಕೊಳ್ಳುತ್ತಾ ಮತ್ತದೆ ದಾರಿಯಲ್ಲಿ ನಡೆಯುತ್ತ ಹೊರಟೆ. ಜಲಪಾತದ ದಾರಿಯಲ್ಲಿ ಬರುವಾಗ ದನಗಳು ಮೇಯುತ್ತಿದ್ದುದು ಕಂಡಿದ್ದೆ. ಸಂಜೆಯಾಗುತ್ತಲೇ ಯಾವುದಾದರೂ ದನದ ಹಿಂದೆ ಹೋದರೆ ಯಾವುದಾದರೂ ಒಂದು ಮನೆಯನ್ನು ಮುಟ್ಟಬಹುದು ಎನ್ನುವ ಉಪಾಯ ಬೇರೆ ಹೊಳೆಯಿತು. ಇವಲ್ಲವುಗಳ ಮಧ್ಯೆ ಕೂಗುವುದನ್ನೇ ಮರೆತಿದ್ದೆ, ಮೊಬೈಲ್ ಜ್ಞಾಪಕ ಬಂದರೂ ಅಲ್ಲಿನ ಲೋಕಲ್ ಕಾಂಟಾಕ್ಟ್ ಯಾರು ಇರಲಿಲ್ಲ. ಹೀಗೆಲ್ಲಾ ಒಬ್ಬನೇ ಆಲೋಚಿಸುತ್ತಾ ನಡೆಯುತ್ತಲೇ ಇದ್ದೇ.

         ಬೆಳಿಗ್ಗೆ ನಾನು ಕಂಡ ಚಾವಡಿ ಕಟ್ಟೆ ಬಂತು. ನಾನು ಮೊದಲ ಬಾರಿ ಹೊಳೆ ದಾಟಿ ಬಂದಿದ್ದಾಗ ಈ ಕಟ್ಟೆ ದಾಟಿ ಹೋಗಿದ್ದೆ, ಹಾಗು ಈ ದಾರಿಯಲ್ಲಿ ಶಿರಾಡಿ ಘಾಟ್ ಕಡೆ ದಾರಿ ತಪ್ಪಿದ್ದೆ. ಈ ಬಾರಿ ಈ ದಾರಿಯಲ್ಲಿ ಒಂದು ಕೋಲಿನಿಂದ ಬಾಣದ ಗುರುತು ಹಾಕಿ ಪಕ್ಕದಲ್ಲಿ ಒಂದು ಎಂದು ಬರೆದೆ. ಯಾವುದಾದರು ಕವಲು ದಾರಿ ಇರಬಹುದೇನೋ ಎಂದು ತೀವ್ರವಾಗಿ ಗಮನಿಸುತ್ತ ಸುಮಾರು ಒಂದತ್ತು ನಿಮಿಷ ನಡೆದಿರಬಹುದು ಆ ದಾರಿಯು ಮತ್ತೆ ಹೊಳೆ ದಾರಿಯೇ ಎಂದು ಗಮನಿಸಲು ತುಂಬಾ ಸಮಯವೇನು ಆಗಲಿಲ್ಲ. ಇಂತಹ ಸಮಯದಲ್ಲೂ ಇದೊಂದು ಅಮೇಜಿಂಗ್ ಎಕ್ಸ್ಪೀರಿಯನ್ಸ್ ಎಂದಂದುಕೊಳ್ಳುತ್ತಲೇ ಇದ್ದೆ. ನಿಧಾನವಾಗಿ ಯಾವುದನ್ನು ನಾನು ಸ್ಪಷ್ಟವಾಗಿ ಯೋಚಿಸದಾದೆ. ಬೆಳಿಗ್ಗೆಯೇನೋ ದಾರಿ ತಿಳಿಯದೇ ತುಂಬಾ ದೂರ ನಡೆದಿದ್ದೆ, ಈಗ ವಾಪಸ್ಸು ಹೋಗಲು ಸಹಾ ದಾರಿ ತಿಳಿಯದೇ ಬಹಳಷ್ಟು ಒದ್ದಾಡಬೇಕಾಯಿತು.

       ಬೆಳಿಗ್ಗೆಯಿಂದ ಹೊಳೆ ದಾಟುವಾಗ ಶೂ ಬಿಚ್ಚುತ್ತಿರಲೇ ಇಲ್ಲ. ನೆಂದ ಷೂ, ನೆಂದ ಪ್ಯಾಂಟ್, ಬಿಸಿಲಿನಿಂದ ನೆನಯುತ್ತಿದ್ದ ಟಿ-ಷರ್ಟ್. ಒಂದೊಂದು ಬಾರಿಯೂ ಹೊಳೆಯ ಬಳಿ ಬಂದು ಅದು ಬಂದ ದಾರಿಯೇ ಎಂದು ತಿಳಿಯುವಷ್ಟರಲ್ಲಿ ಹದಿನೈದು ನಿಮಿಷಗಳಿಗಿಂತಲೂ ಹೆಚ್ಚು ಸಮಯವಾಗುತ್ತಿತ್ತು. ಗುಡ್ಡದ ದಾರಿಯ ಕಡೆ ಹೋದರೆ ಬೇರೆ ದಾರಿಯೇನಾದರು ಸಿಗಬಹುದೇನೋ ಎಂದು ಹೊಳೆ ದಾಟಿ ನಡೆದೆ. ಅಲ್ಲೊಂದು ಕಡೆ ಬಿದಿರು ಮರಗಳು ಕಪ್ಪಾಗಿ ಬಿದ್ದಿದ್ದವು, ಅದನ್ನು ಗುರ್ತಿಸಿಕೊಂಡು ಮುಂದುವರೆದಂತೆ ಜಲಪಾತದ ದಾರಿ ಬಂತು. ಇದಂತು ದಾರಿಯಲ್ಲ ಎಂದು ವಾಪಸ್ಸು ಬಂದೆ, ಎಲ್ಲಿಗೆ ಎಂದರೆ ಹೊಳೆಯ ಬಳಿ. ಈ ಬಾರಿ ಎಡದ ದಾರಿ ಬಿಟ್ಟು ಇನ್ನೊಂದು ದಾರಿಯಲ್ಲಿ ಬಾಣದ ಗುರುತು ಹಾಕಿ ೨ ಎಂದು ಗುರುತಿಸಿದೆ, ಈ ದಾರಿಯು ಮತ್ತೆ ಹೊಳೆಯ ಕಡೆಗೆ ಬಂತು, ಮತಿ ಹೋಗುವ ಹಾಗಾಯಿತು. ನೆಮ್ಮದಿಯಾಗಿ ಒಂದೆಡೆ ಕುಳಿತುಕೊಳ್ಳಲು ಸಹ ಸಹನೆಯಿರಲಿಲ್ಲ... ಬೇಗ ಅಣ್ಣೆಗೌಡ್ರು ಮನೆಗೆ ವಾಪಸ್ಸಗುವ ಮನಸ್ಸು. ಈ ಗೊಂದಲದಲ್ಲಿ ವಿವೇಚನೆಯನ್ನೇ ಕಳೆದಕೊಂಡಂತಾಗಿತ್ತು. ತುಂಬಾ ಭಯಭೀತನಾಗೇನು ಇರಲಿಲ್ಲವಾದರೂ ತಲೆ ಕೆಟ್ಟಹಾಗಿತ್ತು.

ಹಾಗೆಯೇ ನಿಂತು, ಮತ್ತೆ ಬೆಳಗಿನದೆಲ್ಲವನ್ನು ಜ್ಞಾಪಿಸಿಕೊಂಡೆ. ಬೆಳಿಗ್ಗೆ ತೆಗೆದ ಫೋಟೊ ಜ್ಞಾಪಕಕ್ಕೆ ಬಂದು ಹೇಗೆ ನಿಂತೆ, ಹೇಗೆ ತೆಗೆದೆ ಯಾವುದನ್ನು ಖಚಿತವಾಗಿ ಹೇಳಲಾಗಲಿಲ್ಲ. ಆಗ ಕ್ಯಾಮೆರ ಹೊರ ತೆಗೆದು ಪ್ರಿವ್ಯೂನಲ್ಲಿ ಫೋಟೋಗಳನ್ನು ನೋಡಿ, ಯಾವ ಜಾಗದಲ್ಲಿ ನಿಂತು ಫೋಟೋ ತೆಗೆದೆನೋ ತುಲನೆ ಮಾಡತೊಡಗಿದೆ. ಬೆಳಿಗ್ಗೆ ದಾಟಿದ ಹೊಳೆಯ ಆಚೆ ದಾರಿ ಯಾವುದು ಕಾಣಲಿಲ್ಲ. ಈಗ ನೀರು ಹೆಚ್ಚಾದಂತೆ ಭಾಸವಾಗ ತೊಡಗಿತು. ಹುಡುಗನ ಕೈ ಹಿಡಿದು ದಾಟಿದ್ದೆ, ಈಗ ದಾಟಲು ಭಯ. ನೀರಿನ ಆಳ ಒಂದೊಂದು ಕಡೆ ಸೊಂಟದ ಬಳಿಯವರೆಗೂ ಬರುತ್ತಿತ್ತು. ಅಸ್ಸೆಸ್ ಮಾಡಿದೆ. ಹೊಳೆಯ ಆ ಬದಿಗೆ ದಾರಿ ಕಾಣದೇ ಹೋದರು ದಾರಿ ಇರಬಹುದು, ಹಾಗೂ ಹರಿಯುತ್ತಿರುವ ನೀರಿನಲ್ಲಿ ಮುಳುಗುವ ಭಯವಿರಲಿಲ್ಲ, ತಲೆಗೆ, ಕಾಲಿಗೆ ಪೆಟ್ಟಾಗುವ ಸಾಧ್ಯತೆಗಳನ್ನು ಹೊರತುಪಡಿಸಿದರೆ. ಕ್ಯಾಮೆರ, ಮೊಬೈಲ್ ಬ್ಯಾಗ್ ಸೇರಿದವು, ಒಂದು ಗಟ್ಟಿಯಾದ ಕೋಲನ್ನು ಹಿಡಿದು ದೇವರನ್ನು ನೆನೆದು ಧೈರ್ಯ ಮಾಡಿ ನೀರಿಗಿಳಿದೆ. ಬರ ಬರುತ್ತ ಆಳವಾಗುತ್ತಿತ್ತು, ಬಂಡೆಗಳ ನಡುವಿನ ನೀರಿನ ಹರಿವು ಜಾಸ್ತಿ ಇರುವ ಕಡೆ ಬಳಸಿ ಬಂಡೆಗಳನ್ನು ಹಿಡಿದು ಕೇವಲ ೫೦, ೬೦ ಅಡಿ ಅಗಲ ಆ ಕಪಿಲಾ ನದಿಯನ್ನು ಭಯ ಮತ್ತು ಎಕ್ಸ್‌ಟ್ರೀಮ್ ಕಾಳಜಿಯಿಂದ ದಾಟಿದೆ. ಮುಂದೆ ಬಂದಾಗ ಒಂದು ಕಾಲು ದಾರಿ ಮತ್ತು ಗೌಡ್ರ ಹೊಲದ ಬೇಲಿ ಕಾಣಿಸಿತು, ನನಗೆ ನೆಮ್ಮದಿಯಾಯಿತು. ಅಣ್ಣೇಗೌಡ್ರು ಮನಗೆ ಬಂದೆ ಸುಸ್ತಾಗಿ ಕುಳಿತೆ. ಸುಮಾರು ಎರಡು ಗಂಟೆಗಳ ಕಾಲ ನಾನು ಅಲ್ಲಲ್ಲೆ ಸುತ್ತುಹಾಕಿದ್ದೆ. ಗೌಡ್ರು ಎರಡುಬಾರಿ ಹೊಳೆ ಸಿಗುತ್ತದೆ ಎಂದಿದ್ದು ಆ ನದಿ ಸುತ್ತಿ ಬಳಸಿ ಹರಿಯುತ್ತಿದ್ದರಿಂದ, ಹಾಗೂ ನಾನು ದಾರಿ ಕಳೆದುಕೊಂಡಿದ್ದು ಅದರ ಸಲುವಾಗಿಯೇ. ಬೆಳಿಗ್ಗೆ ದಾರಿ ತಪ್ಪಿದ್ದು ಒಂದು, ಜಲಪಾತದ ಬಳಿ ದಾರಿ ಕೊನೆಗೊಂಡಿದ್ದು ಎರಡು, ಆ ದೊಡ್ಡ ಕಾಡಿನ ದಾರಿಯಲ್ಲಿ ಕೊನೆಯವರೆಗೂ ಎಲ್ಲೂ ಗುಡ್ಡವೇ ಕಾಣುತ್ತಿರಲಿಲ್ಲ, ಹೀಗೆ ಮೂರು ಮತ್ತು ಒಂಟಿ ಮನಸ್ಸಿನ ನೂರಾರು ಯೋಚನೆಗಳು ನಾನು ದಾರಿ ತಪ್ಪಲು ಕಾರಣವಿರಬಹುದು. ಕೊನೆಯ ಕಾರಣವಂತು ಇಂಟರ್‌ನೆಟ್‌ನ ಲೇಖನವನ್ನು ದೃಡೀಕರಿಸಿದ ಹಾಗಿತ್ತು.

ಕೊನೆಯದಾಗಿ ನಾನು ಎತ್ತಿನಭುಜ ಚಾರಣ ಮುಗಿಸಿದ ರೀತಿ. ಗೌಡ್ರು ಎಲ್ಲ ವಿಷಯ ತಿಳಿದುಕೊಂಡು ಆ ರಾತ್ರಿ ನಾನು ಅವರ ಮನೆಯಲ್ಲಿ ಉಳಿದುಕೊಳ್ಳಲು ಒಪ್ಪಿ ಯೋಚಿಸುತ್ತಾ ಬೆಳಿಗ್ಗೆಗೆ ನನ್ನ ಜೊತೆ ಗುಡ್ಡಕ್ಕೆ ಹೋಗಲು ಜಗದೀಶ ಎನ್ನುವ ಯುವಕನೊಬ್ಬನನ್ನು ಗುರ್ತುಮಾಡಿದರು. ದಿನವೆಲ್ಲಾ ಅದು ಇದು ಮಾತನಾಡುತ್ತ ಕಾಡಿನ ಬಗ್ಗೆ, ಅವರು ತೋಟಮಾಡಿದ ರೀತಿ ಎಲ್ಲವನ್ನು ವಿವರಿಸುತ್ತ ಹತ್ತಿರವಾದರು. ಬೆಳಿಗ್ಗೆ ರುಚಿಯಾದ ಅಕ್ಕಿ ರೊಟ್ಟಿ ತಿಂದು ಅವರಿಂದ ಆತ್ಮೀಯವಾಗಿ ಬೀಳ್ಕೊಂಡ ನನ್ನೊಂದಿಗೆ ಎರಡು ನಾಯಿಗಳು, ಜಗದೀಶ ಮತ್ತು ಸಿಂಗಲ್ ಬ್ಯಾರೆಲ್ ಬಂದೂಕದೊಂದಿಗೆ ಎತ್ತಿನಭುಜಕ್ಕೆ ಹೊರಡಲು ಅನುವಾದರು. ನಿನ್ನೆಯ ದಿನ ಹೋದ ದಾರಿಯಲ್ಲಿ ಹೋಗದೆ ನೀರು ಕಡಿಮೆ ಮತ್ತು ಎರಡು ಬಾರಿ ನೀರಿಗಿಳಿಯುವುದನ್ನು ತಪ್ಪಿಸಲು ಬೇರೊಂದು ದಾರಿಯಲ್ಲಿ ಬಂದ ನಾವು ಕಪ್ಪಾಗಿ ಬಿದ್ದಿದ್ದ ಬಿದಿರು ಮೆಳೆಯ ಕಡೆ ಬಂದಾಗ ನಾನು ಮಾಡಿದ್ದ ಗುರ್ತುಗಳು ಮತ್ತೆ ನನ್ನನ್ನು ಅಣಕಿಸಿದ್ದವು. ಆದರೆ ಜಲಪಾತದ ದಾರಿಯಲ್ಲೇ ಸಾಗಿದ ನಾವು ಅದಕ್ಕಿಂತ ಮುಂಚೆ ಅದೇ ಗೌಡ್ರು ಅಂದಂತೆ ಎಡದ ದಾರಿಗೆ ಹತ್ತಲು ಶುರು ಮಾಡಿದೆವು. ಇದಂತು ದಾರಿಯೆಂದು ನಾನು ಖಂಡಿತ ಒಪ್ಪುವುದಿಲ್ಲ, ಗುರ್ತೇಸಿಗದ ಹಾಗೆ ಆ ದಾರಿಯಿತ್ತು. ಅಲ್ಲಿಂದ ಶುರುವಾದ ಏರಿನ ದಾರಿ ಕೊನೆಯವರೆಗೂ ಮುಗಿಯಲಿಲ್ಲ. ಬಲು ದಟ್ಟವಾದ ಕಾಡಿನಲ್ಲಿ ನುಸುಳುತ್ತಾ ಹೋದೆವು. ಮರಗಳಂತೂ ಕೊನೆ ಮೊದಲಿಲ್ಲದೇ ಬಂದೇ ಬರುತ್ತಿತ್ತು, ಎಲ್ಲಿ ಬೆಟ್ಟದ ತುದಿ ದೊರೆತು ದಾರಿ ಸ್ವಲ್ಪ ಸಮನಾಗುವುದೋ ಎಂದು ಕೇಳಲೇಬೇಕಾಯಿತು. ಬೆಟ್ಟದ ಒಂದು ಬದಿಯಂತು ನಮ್ಮ ಎತ್ತರಕ್ಕೆ ಬೆಳೆದು ನನಗಿಂತ ಒಂದತ್ತು ಅಡಿ ದೂರದಲ್ಲಿದ್ದ ನನ್ನ ಗೈಡು ಕೂಡ ಕಾಣುತ್ತಿರಲಿಲ್ಲ. ತೀರ ಮಾತನಾಡುವ ಧಾಟಿ ಇಲ್ಲದ ಜಗದೀಶ ಭಾರವಾದ ಗನ್ನು ಹೆಗಲೇರಿಸಿ ಬಿರ ಬಿರನೇ ನಡೆಯುತ್ತಿದ್ದ. ಇಲ್ಲಿ ೫೦ ಭಾಗದಷ್ಟು ಹತ್ತಿದ ನಂತರ ನಾನು ಸುಸ್ತಾದೆ. ಹತ್ತುವುದು ನಿಧಾನವಾಯಿತು, ಜಿಗಣೆಗಳು ಇದ್ದವೆಂಬುದು ಬೈ ಡಿಫ಼ಾಲ್ಟ್ ಸ್ಟೇಟ್‌ಮೆಂಟ್. ದಣಿವಾರಿಸಿಕೊಳ್ಳಲು ನಿಂತರೆ ಒಂದಿಂಚಿಗಿಂತಲು ಉದ್ದುದ್ದ ಜಿಗಣೆಗಳು ಸೈನಿಕರಂತೆ ಆಕ್ರಮಣಕ್ಕೆ ಬರುತ್ತಿದ್ದವು. ಎಲ್ಲೆಲ್ಲಿ ಹತ್ತಿದವೋ ನಾನಂತು ನೋಡಿಕೊಂಡಿರಲಿಲ್ಲ, ಆಗಾಗ ಕೊಡವಿ ನಡೆಯುತ್ತಿದ್ದೆನಷ್ಟೆ. ಮನೆಗೆ ಬಂದು ಆದ ಚಿಕ್ಕ ಗಾಯಗಳನ್ನೆಲ್ಲ ಎಣಿಸಿದಾಗ ಒಟ್ಟು 43ಕಡೆ ಕಚ್ಚಿದ್ದವು. 44ನೆಯದು ನನಗೆ ತಿಳಿದಿದ್ದು ಎರಡು ದಿನ ಕಳೆದ ನಂತರ ಪ್ಯಾಂಟ್ ಏರಿಸಿಕೊಳ್ಳುವಾಗ, ಕಿಬ್ಬೊಟ್ಟೆ ಬಳಿ ತೊಡೆ ತುರಿಕೆಯಾಗಿ ಏನೆಂದು ನೋಡಿದರೆ ಅಲ್ಲಿ ದಾಖಲೆಯ 44ನೇ ಜಿಗಣೆ ಗುರುತು. ಭಯ ಮಿಶ್ರಿತ ನಗು ತಡೆಯಲಾಗಲಿಲ್ಲ, ಮೇಲಿನವರೆಗೂ ಹತ್ತುವವು ಎಂದಷ್ಟೇ ಕೇಳಿದ್ದೆ, ಈಗ ಸ್ವತಃ ಅನುಭವಕ್ಕೆ ಬಂತು. ಕೊನೆಯ ಘಟ್ಟಕ್ಕೆ ಬಂದು ನೋಡಿದರೆ ಎತ್ತಿನಭುಜ ಭವ್ಯವಾಗಿ ನಿಂತಿತ್ತು. ಸುತ್ತಲೂ ವಿಶಾಲ ಕಾಡಿನ ಹರವು ನಾನು ಒಂಟಿಯಾಗಿ ಹತ್ತಿಬರುವೆ ಎಂದಂದುಕೊಂಡಿದ್ದ ಹಮ್ಮು ಎಲ್ಲೋ ಕಾಡಿನ ಮಧ್ಯೆ ಲೀನವಾಗಿತ್ತು. ಇಷ್ಟು ದಿನಗಳ ಚಾರಣದಲ್ಲಿ ದಟ್ಟ ಕಾಡಿನ ಮರಗಳ ಗ್ರೀನ್ ಬ್ಯಾಕ್‌ಗ್ರೌಂಡನ್ನು ಮಾತ್ರನೋಡಿದ್ದೆ, ಅವುಗಳ ಮಧ್ಯೆ ದಾರಿಯಿಲ್ಲದ ದಾರಿಯಲ್ಲಿ ನುಸುಳಿ ಈ ಬೆಟ್ಟವನ್ನು ಹತ್ತಿ ರೋಮಾಂಚನೀಯ ಅನುಭವವನ್ನು ಕೇವಲ ಹದಿನೈದು ನಿಮಿಷ ಮಾತ್ರ ಹೊಂದುವಂತಾಯಿತು. ಅದಾಗಲೇ ಮೋಡ ಕಪ್ಪಿಡುತ್ತಿತ್ತು, ಜಗದೀಶ ವಾಪಸ್ಸು ಹೋಗಬೇಕಿತ್ತು. ದೂರದಲ್ಲಿ ಬೈರಾಪುರದ ದಾರಿ ಕಾಣುವವರೆಗೆ ನನ್ನನ್ನು ಕರೆತಂದು ಜಗದೀಶ ಅಲ್ಲಿಂದ ಬೀಳ್ಕೊಂಡ.
Waiting for the bus at Bairapura, a beautiful, calm village.
       ನಾನು ಬೈರಾಪುರ ದೇವಸ್ಥಾನ ಸೇರಿದಾಗ ಅಲ್ಲಿ ಭೈರವೇಶ್ವರನಿಗೆ ಕಾರ್ತೀಕ ಪೂಜೆ, ವಿಶೇಷ ದರ್ಶನಪಡೆದು ರುಚಿಯಾದ ಕೆಂಪಕ್ಕಿ ಅನ್ನ ಮಲೆನಾಡು ಸೌತೆಕಾಯಿ ಸಾಂಬಾರು, ಪಾಯಸ ತಿಂದು, ಸಂಜೆಯ ೪ಗಂಟೆ ಮೂಡಿಗೆರೆ ಬಸ್ಸಿಗೆ ಕಾದು ಕುಳಿತೆ. ಬೆಳಿಗ್ಗೆ ಅಣ್ಣೇಗೌಡ್ರ ಜೊತೆ ಫೋಟೋ ತೆಗೆದ ನಂತರ ಕ್ಯಾಮೆರ ಬ್ಯಾಟರಿ ಎಕ್ಸ್‍ಹಾಸ್ಟೆಡ್ ಎಂದು ತೋರಿಸಿ ಮಲಗಿತ್ತು. ಒಂದಾದರು ಚಿತ್ರ ತೆಗೆಯಲಾಗಲಿಲ್ಲ ಎಂದು ಹೊರ ತೆಗೆದು ಆನ್ ಮಾಡಿದರೆ ಹಲವಾರು ಫೊಟೊ ತೆಗೆದರು ಮುಗಿಯದ ಬ್ಯಾಟರಿ ಬೆಳಿಗ್ಗೆ ಹೇಗೆ ನಿರಾಕರಿಸಿತೋ ತಿಳಿಯಲಿಲ್ಲ.  ಎಲ್ಲಾ ಅಯೋಮಯ, ವಿಶಿಷ್ಟ ಅನುಭವಗಳು. ಮತ್ತೆ ಒಂಟಿ ಚಾರಣ ಮಾಡಬೇಕೋ ಬೇಡವೋ ತಿಳಿಯದ ಪರಿಸ್ಥಿತಿ.

Comments

Popular posts from this blog

Gelati!