ದುಡಿಮೆಯ ಮೋಜು, ಮಜಾ!
ದುಡಿಮೆಯ ಮೋಜು, ಮಜಾ!!! ಆ ಜಮಾನ ಹಣದ ಬಗ್ಗೆ ಹೇಳುತ್ತಾ ಹೊರಟರೆ ಬಹಳಷ್ಟು. ನನ್ನ ನೆನಪುಗಳಿಂದ, ನನ್ನ ಸಂಪಾದನೆಯ ಖುಷಿಯ ಮೆಲಕು ಹಾಕುವ ಪ್ರಯತ್ನ. ಅಪ್ಪ ಅಮ್ಮನದೋ ಕೂಲಿ ಕಾಯಕದ ಪ್ರಪಂಚ. ವಾರದ ದುಡಿಮೆಯಲ್ಲಿ ನಮಗೆ ಕೊಡುತ್ತಿದ್ದುದು ಬಿಡಿಗಾಸು, ಎಷ್ಟು ಸಂಪಾದನೆಯೋ ತಿಳಿಯದು, ಅಮ್ಮನ ಜೊತೆ ಭಾನುವಾರದ ಬಟವಾಡೆಗೆ ಬೆಳಿಗ್ಗೆಯೆ ಎದ್ದು ಜೊತೆ ಹೋದರೆ ಮಧ್ಯಾನ್ಹದವರೆಗೂ ರೇಶಿಮೆ ಹುರಿಮಾಡುವ ಫ್ಯಾಕ್ಟರಿಯಲ್ಲಿ ಅದು ಇದು ನೋಡುತ್ತಾ ಕಾಲಹರಣ, ಬಟವಾಡೆ ಆದ ನಂತರ ನಾಗಪ್ಪ ಬ್ಲಾಕ್‍ನ ಮಾರುಕಟ್ಟೆಯಲ್ಲಿ ವಾರಕ್ಕಾಗುವ ದಿನಸಿ ಸಾಮಾನು ಖರೀದಿಸಿ, ಬಟ್ಟೆಯ ಚೀಲದಲ್ಲಿ ಹೊತ್ತುತಂದರೆ ಸಿಗುತ್ತಿದ್ದ ಐದತ್ತು ಪೈಸೆಗಳೇ ನನ್ನ ಮೊದಲ ಆದಾಯವೆನ್ನಬಹುದು. ಆ ಜಮಾನದಲ್ಲಿ ೧, ೨, ೩, ೫ ಮತ್ತು ೧೦ ಪೈಸೆಯ ನಾಣ್ಯಗಳಿರುತ್ತಿದ್ದವು. ಪೈಸೆಗೆ ಎರಡು ಚಿಕ್ಕ ಬಿಸ್ಕತ್ತುಗಳು ಸಿಗುತ್ತಿದ್ದವು. ಐದು ಪೈಸೆಗೆ ಹತ್ತು ನಿಂಬೆ ಹುಳಿಯ ಚಿಕ್ಕ ಚಿಕ್ಕ ಮಿಠಾಯಿಗಳು ದೊರೆಯುತ್ತಿದ್ದವು. ಐದು ಪೈಸೆಗಳಿಗೆ ಕುಣಿಯುವ ಬೊಂಬೆ ಮಿಠಾಯಿಯ ವಾಚ್ ಕಟ್ಟಿಸಿಕೊಂಡು ನೆಕ್ಕುತ್ತಿದ್ದೆವು, ಅಥವಾ ಕಡಲೆ ಬೆಲ್ಲ ಜೇಬಿನಲ್ಲಿರಿಸಿಕೊಂಡು ಒಂದೊಂದೆ ಬಾಯಿಗೆ ಎಸೆದುಕೊಂಡು ಬೆಲ್ಲ ಇಷ್ಟಿಷ್ಟೆ ತಿನ್ನುತ್ತಿದ್ದೆವು. ಜೇಬು ತುಂಬಾ ಚಟಾಕು ಕಡಲೆ ಮತ್ತು ಒಂದುಂಡೆ ಬೆಲ್ಲ, ನಮ್ಮ ಪ್ರಪಂಚವೇ ಬೇರೆ ಇರುತ್ತಿತ್ತು. ಜಮಾನ ೧೯೭೫-೮೫ ಆಗ ದುಡಿಮೆಯ ಕಾಲವಲ್ಲ, ಒಮ್ಮೆ ಯಾರೋ ನೆಂಟನೊಬ್ಬ ಬಂದ,...