ಮಳೆ ಹುಟ್ಟುವ ನಾಡಿಗೆ:
ನಮ್ಮ ಮಲೆನಾಡಿನಲ್ಲಿ ಮಳೆಯ ಆನಂದ ಹೊಂದುವುದೇ ಒಂದು ಸಾಹಸ ಎಂತಂದುಕೊಂಡು ಜುಲೈ ತಿಂಗಳ ಆದಿಯಲ್ಲಿ ನಾವು ಮೂಡಿಗೆರೆಯ ಕಡೆಗೆ ಹೊರೆಟೆವು. ಬಹಳ ದಿನಗಳಿಂದಲೂ ಚಾರಣಕ್ಕೆ ಹೊಗಲಾಗಿರಲಿಲ್ಲ, ಎತ್ತೊ ಒಂದತ್ತ ತೊಲಗಿ ಹೋಗಬೇಕೆಂದು ನಿರ್ಧರಿಸಿ ಮೂಡಿಗೆರೆ ತಲುಪುವವರೆಗೂ ನಮ್ಮ ಕಾರ್ಯಕ್ರಮ ನಿಗದಿ ಮಾಡಿಕೊಂಡಿರಲಿಲ್ಲ. ಹಾಸನ ದಾಟಿ ಚಿಕ್ಕಮಗಳೂರು ತಲುಪುವ ದಾರಿಯಲ್ಲಿ ದೊಡ್ಡಗದ್ದುವಳ್ಳಿಯಲ್ಲಿ ಸ್ವಲ್ಪ ನಿಲ್ಲಿಸಿ, ಹತ್ತಿರದ ಹೊಯ್ಸಳರ ಕಾಲದ ದೇವಸ್ಥಾನವೊಂದನ್ನು ತಲುಪಿದೆವು. ಬಹಳ ಸುಂದರವಾದ ದೇವಾಲಯದಲ್ಲಿ, ಕಾಳಿ ಸೌಮ್ಯರೂಪಿಯಾಗಿ ನೆಲೆಯಾಗಿದ್ದಾಳೆ. ಮುಖಮಂಟಪ ದಾಟಿ ಒಳಹೊಕ್ಕರೆ ನಾಲ್ಕು ದಿಕ್ಕುಗಳಲ್ಲು ಪ್ರಮುಖ ದೇವರುಗಳ ಸುಂದರ ವಿಗ್ರಹಗಳಿವೆ. ಎಡ ಭಾಗದ ಗರ್ಭ ಗುಡಿಯಲ್ಲಿ ಕಾಳಿ ಇದ್ದರೆ, ಎದುರಿಗೆ ವಿಷ್ಣುವಿನ ಮೂರ್ತಿ ಇದೆ. ಕಾಳಿಯ ಕೋಪವನ್ನು ನಿಗ್ರಹಿಸಲು ವಿಷ್ಣು ಎದುರಿಗಿದ್ದರೆ, ಲಕ್ಷ್ಮಿಯ ಎದುರಿಗೆ ಶಿವಲಿಂಗದ ಪ್ರತಿಸ್ಟಾಪನೆಯಿದೆ. ಕೊಲ್ಲಾಪುರದ ನಂತರ ನಿಂತ ಲಕ್ಷ್ಮಿ ದೇಗುಲ ಇದೊಂದೇ ಅಂತೆ. ಮೇಲ್ಚಾವಣಿಯಲ್ಲಿ ಅಷ್ಟದಿಕ್ಕುಗಳಲ್ಲಿ ಬ್ರಹ್ಮ, ವಿಷ್ಣು ವಿವಿಧ ದೇವರುಗಳು ತಮ್ಮ ವಾಹನಗಳ ಮೇಲೆ ರಾರಾಜಿಸಿದ್ದಾರೆ. ಅವುಗಳ ವಿವರಗಳನ್ನು ನಾವೀಗಾಗಲೆ ಮರೆತಿದ್ದೇವೆ. ಚಿಕ್ಕಮಗಳೂರಿನ ಕಡೆ ಹೋಗುವಾಗ ಸಮಯ ಮಾಡಿಕೊಂಡು ಹಲವು ರೀತಿಗಳಿಂದಲೂ ವಿಶಿಷ್ಟವಾದ ಈ ದೇವಸ್ಥಾನವನ್ನು ಒಮ್ಮೆ ನೋಡಲೇಬೇಕಾದದ್ದು. ನಮ್ಮ ಮುಂದಿನ ನಿಲುಗಡೆ, ...